ಅಂಕೋಲಾದ ಶಿರೂರು ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆ ಖಾರ್‌ಲ್ಯಾಂಡ್ ಕಾಮಗಾರಿಗೆ ಆಸಕ್ತಿವಹಿಸಿದ್ದು, ಅದರ ತಾಂತ್ರಿಕ ಮಾಹಿತಿ ಗೊಂದಲಕ್ಕೆ ಕಾರಣವಾಗಿದೆ. ಹೀಗಾಗಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಯೋಜನೆ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕು ಎಂದು ಅಲ್ಲಿನ ಜನ ಆಗ್ರಹಿಸಿದ್ದಾರೆ.
ಈ ಕಾಮಗಾರಿ ಶುರು ಮಾಡುವ ದಿಕ್ಕಿನ ಬಗ್ಗೆ ಊರಿನಲ್ಲಿ ಚರ್ಚೆ ನಡೆಯುತ್ತಿದೆ. ಇದೇ ವಿಷಯವಾಗಿ ಭಿನ್ನಾಭಿಪ್ರಾಯಗಳು ಮೂಡಿದ್ದು, ಪರ-ವಿರೋಧದ ಮಾತು ಕೇಳಿ ಬರುತ್ತಿದೆ. ಕೆಲವರು ಗುತ್ತಿಗೆದಾರರು ಮಾಡುವ ಕೆಲಸದ ಬಗ್ಗೆ ಸಹಮತವ್ಯಕ್ತಪಡಿಸಿದ್ದಾರೆ. ಉಳಿದವರು ನೀರು ಹರಿಯುವ ವಿರುದ್ಧ ದಿಕ್ಕಿನಲ್ಲಿ ಕಾಮಗಾರಿ ಶುರು ಮಾಡಿದರೆ ತಾಂತ್ರಿಕ ದೋಷವಾಗುವ ಬಗ್ಗೆ ಹೇಳಿದ್ದಾರೆ.
ಗ್ರಾಮಸ್ಥರಾದ ಪುರುಷೋತ್ತಮ ನಾಯ್ಕ ಹಾಗೂ ಸಹಚರರು `ಕಾಮಗಾರಿಯನ್ನು ನೀರಿನ ಹರಿವಿನ ದಿಕ್ಕಿಗೆ ವಿರುದ್ಧವಾಗಿ ಮಾಡಲಾಗುತ್ತಿದ್ದು, ಇದರಿಂದ ಮಳೆಗಾಲದಲ್ಲಿ ನೀರಿನ ಒತ್ತಡಕ್ಕೆ ಸಿಲುಕಿ ಖಾರ್‌ಲ್ಯಾಂಡ ಕಾಮಗಾರಿಯು ಹಾನಿಯಾಗುವ ಭೀತಿಯಿದೆ’ ಎಂದು ಹೇಳಿದ್ದಾರೆ. ಈ ಬಗ್ಗೆ ಅವರು ಲಿಖಿತ ಅರ್ಜಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. `ಕೆಪಿಡಬ್ಲ್ಯೂಡಿ ನಿಯಮಾವಳಿಗಳ ಪ್ರಕಾರ ಯಾವುದು ಸುರಕ್ಷಿತವೋ ಆ ರೀತಿಯಲ್ಲೇ ಕಾಮಗಾರಿ ನಡೆಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
`ಊರಿನ ಕೆಲವರು ಗುತ್ತಿಗೆದಾರರ ಕೆಲಸಕ್ಕೆ ಒಪ್ಪಿಗೆ ನೀಡಿದ್ದಾರೆ. ಆದರೆ ಕಾಮಗಾರಿ ಶಾಶ್ವತವಾಗಿ ಉಳಿಯಬೇಕಾದರೆ ಅದು ತಾಂತ್ರಿಕವಾಗಿ ಬಲವಾಗಿರಬೇಕು. ಜನರ ಒಪ್ಪಿಗೆಗಿಂತ ಸುರಕ್ಷತೆ ಹಾಗೂ ನಿಯಮ ಮುಖ್ಯವಾಗಿರಬೇಕು. ಹೀಗಾಗಿ ಈ ಕೂಡಲೇ ಸಣ್ಣ ನೀರಾವರಿ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಬೇಕು’ ಎಂದು ಪುರುಷೋತ್ತಮ ನಾಯ್ಕ ಅವರು ಹೇಳಿದ್ದಾರೆ. `ಯಾವುದು ಸರಿ-ಯಾವುದು ತಪ್ಪು ಎಂಬುದನ್ನು ಸ್ಪಷ್ಟಪಡಿಸಿದ ನಂತರವೇ ಕಾಮಗಾರಿ ಮುಂದುವರಿಸಬೇಕು’ ಎಂದವರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಅವರು ಸಣ್ಣ ನೀರಾವರಿ ಇಲಾಖೆ ಅಧಿಕಾರಿ, ತಹಶೀಲ್ದಾರ್, ಪಂಚಾಯತ ಹಾಗೂ ಜಿಲ್ಲಾಡಳಿತಕ್ಕೆ ತಮ್ಮ ಪತ್ರ ಕಳುಹಿಸಿದ್ದಾರೆ. `ಗ್ರಾಮಸ್ಥರಲ್ಲಿರುವ ಗೊಂದಲ ಬಗೆಹರಿಸಿ ಗುಣಮಟ್ಟದ ಕಾಮಗಾರಿ ನಡೆಸಿ’ ಎಂದವರು ಪತ್ರದ ಮೂಲಕ ಹೇಳಿದ್ದಾರೆ.