140 ಕಿಮೀ ಕರಾವಳಿ, 10.25 ಲಕ್ಷ ಹೆಕ್ಟೇರ್ ಭೂ ಭಾಗವನ್ನು ಹೊಂದಿರುವ ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಲ್ಕು ಉಪವಿಭಾಗಗಳಿವೆ. ಆದರೆ, ಅದಕ್ಕೆ ತಕ್ಕ ಹಾಗೇ ಸಹಾಯಕ ಆಯುಕ್ತರಿಲ್ಲ!
ರಾಜ್ಯದಲ್ಲಿಯೇ ಅತಿ ದೊಡ್ಡ ಪ್ರದೇಶವನ್ನು ಹೊಂದಿದ ಉತ್ತರ ಕನ್ನಡ ಜಿಲ್ಲೆಯನ್ನು ಸರ್ಕಾರ ಆಡಳಿತ ಕಾರಣಕ್ಕಾಗಿ ನಾಲ್ಕು ಉಪವಿಭಾಗಗಳನ್ನು ಸೃಷ್ಠಿಸಿದೆ. ಕಾರವಾರ, ಕುಮಟಾ, ಶಿರಸಿ ಹಾಗೂ ಭಟ್ಕಳ ವಿಭಾಗಕ್ಕೆ ಪ್ರತ್ಯೇಕ ಸಹಾಯಕ ಆಯುಕ್ತರ ಹುದ್ದೆಯನ್ನು ಸೃಷ್ಠಿಸಿದೆ. ಆದರೆ, ಆ ಹುದ್ದೆಗೆ ಅಗತ್ಯವಿರುವ ಅಧಿಕಾರಿಯನ್ನು ಮಾತ್ರ ನೇಮಿಸುತ್ತಿಲ್ಲ.
ಮೊದಲು ಈ ನಾಲ್ಕು ಉಪವಿಭಾಗಕ್ಕೆ ನಾಲ್ಕು ಪ್ರತ್ಯೇಕ ಸಹಾಯಕ ಆಯುಕ್ತರಿದ್ದರು. ಕಾರವಾರದಲ್ಲಿ ಕನಿಷ್ಕ ಅವರು ಸಹಾಯಕ ಆಯುಕ್ತರಾಗಿದ್ದರು. ಕುಮಟಾದಲ್ಲಿ ಶ್ರವಣಕುಮಾರ ಅವರು ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಭಟ್ಕಳದಲ್ಲಿ ನಯನಾ ಅವರು ಉಪವಿಭಾಗಾಧಿಕಾರಿಯಾಗಿದ್ದರು. ಶಿರಸಿಯಲ್ಲಿ ಕಾವ್ಯರಾಣಿ ಅವರು ಕೆಲಸ ನಿರ್ವಹಿಸುತ್ತಿದ್ದರು. ಹೀಗಿರುವಾಗ ಭಟ್ಕಳದಲ್ಲಿದ್ದ ಕನಿಷ್ಕ ಅವರು ದೀರ್ಘಕಾಲದ ರಜೆಪಡೆದರು. ಕಾರವಾರದಲ್ಲಿದ್ದ ಕನಿಷ್ಕ ಅವರು ಅಲ್ಲಿಂದ ವರ್ಗವಾದರು. ಸರ್ಕಾರ ಈ ಎರಡು ಹುದ್ದೆಗಳಿಗೆ ಬೇರೆ ಅಧಿಕಾರಿಗಳನ್ನು ನೇಮಿಸುವ ಬದಲು ಪ್ರಭಾರಿ ಹುದ್ದೆ ನೀಡಿತು. ಅದರ ಪ್ರಕಾರ, ಶಿರಸಿಯ ಕಾವ್ಯರಾಣಿ ಅವರು ಭಟ್ಕಳದ ಜವಾಬ್ದಾರಿವಹಿಸಿಕೊಂಡರು. ಕುಮಟಾದ ಶ್ರವಣಕುಮಾರ ಅವರು ಕಾರವಾರದ ಹೊಣೆ ಹೊತ್ತರು.
ಹಳಿಯಾಳದ ಹಳ್ಳಿಯಿಂದ ಭಟ್ಕಳದ ತುದಿಯವರೆಗೂ ಸಂಚರಿಸಿ ಕೆಲಸ ನಿರ್ವಹಿಸುವುದು ಸಹಾಯಕ ಆಯುಕ್ತೆ ಕಾವ್ಯರಾಣಿ ಅವರಿಗೆ ಹೊರೆಯಾಗಿತ್ತು. ಕುಮಟಾದಿಂದ ಜೊಯಿಡಾದವರೆಗಿನ ಉಸ್ತುವಾರಿ ನೋಡಿಕೊಳ್ಳುವುದು ಶ್ರವಣಕುಮಾರ ಅವರಿಗೆ ಬಾರವಾಗಿತ್ತು. ಇದರಿಂದ ಅನೇಕ ಭೂ ವ್ಯಾಜ್ಯ, ಕಂದಾಯ ಪ್ರಕರಣಗಳು ಪ್ರಗತಿ ಕಾಣುತ್ತಿರಲಿಲ್ಲ. ಈ ಬಗ್ಗೆ ಗೊತ್ತಿದ್ದರೂ ಸರ್ಕಾರ ಹೊಸ ಅಧಿಕಾರಿಗಳ ನೇಮಕ ಮಾಡಿರಲಿಲ್ಲ. ಈ ಎಲ್ಲದರ ನಡುವೆ ಸದ್ಯ ಶಿರಸಿ ಜೊತೆ ಭಟ್ಕಳದಲ್ಲಿಯೂ ಪ್ರಭಾರಿಯಾಗಿದ್ದ ಕಾವ್ಯರಾಣಿ ಅವರನ್ನು ವರ್ಗಾಯಿಸಿದೆ. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಶ್ರವಣಕುಮಾರ ಅವರೊಬ್ಬರೇ ಉತ್ತರ ಕನ್ನಡ ಜಿಲ್ಲೆಯ ಸಹಾಯಕ ಆಯುಕ್ತರಾಗಿದ್ದಾರೆ.
ನಂತರ ಶಿರಸಿ ಹಾಗೂ ಕುಮಟಾ ಸಹಾಯಕ ಆಯುಕ್ತರಿಗೆ ಭಟ್ಕಳ ಹಾಗೂ ಕಾರವಾರದ ಪ್ರಭಾರಿ ಹುದ್ದೆ ಕೊಡಲಾಗಿದ್ದು, ಇದೀಗ ಶಿರಸಿ ಸಹಾಯಕ ಆಯುಕ್ತರಾಗಿದ್ದ ಕಾವ್ಯರಾಣಿ ಅವರನ್ನು ಸರ್ಕಾರ ವರ್ಗಾಯಿಸಿದೆ. ಹೀಗಾಗಿ ಇಡೀ ಉತ್ತರ ಕನ್ನಡ ಜಿಲ್ಲೆಗೆ ಸದ್ಯ ಕುಮಟಾ ವಿಭಾಗಾಧಿಕಾರಿ ಶ್ರವಣಕುಮಾರ ಅವರೇ ಸಹಾಯಕ ಆಯುಕ್ತರಾಗಿದ್ದಾರೆ. ಕಾವ್ಯರಾಣಿ ಅವರ ವರ್ಗಾವಣೆ ಆದೇಶ ಆಗಿದ್ದರೂ ಅವರನ್ನು ಸಹಾಯಕ ಆಯುಕ್ತ ಹುದ್ದೆಯಿಂದ ಬಿಡುಗಡೆ ಮಾಡಿಲ್ಲ. ಅವರ ವರ್ಗಾವಣೆ ಖಚಿತವಾಗಿದ್ದು, ಬಿಡುಗಡೆಗೂ ಮುನ್ನ ಬೇರೆ ಅಧಿಕಾರಿ ನೇಮಕ ಆಗದೇ ಇದ್ದರೆ ಸಮಸ್ಯೆ ಇನ್ನಷ್ಟು ಜಟಿಲವಾಗಲಿದೆ.