ಶಿರಸಿ-ಕುಮಟಾ ರಸ್ತೆ ಅವ್ಯವಸ್ಥೆಯ ಬಗ್ಗೆ ಜನ ಆಕ್ರೋಶವ್ಯಕ್ತಪಡಿಸಿದ್ದು, ಹೋರಾಟ ನಡೆಸಿದ್ದಾರೆ. ವಿವಿಧ ಹೋರಾಟಗಳಲ್ಲಿ `ರಕ್ತ ಕ್ರಾಂತಿ’ಯ ಹೇಳಿಕೆ ನೀಡುತ್ತಿದ್ದ ಕರಾವಳಿ ಕನ್ನಡ ಸಂಘದ ಭಾಸ್ಕರ ಪಟಗಾರ ಅವರು ಈ ಬಾರಿ ಬಹುತೇಕ ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸಿದ್ದಾರೆ.
ಮಂಗಳವಾರ ಕುಮಟಾದ ಕತಗಾಲದಲ್ಲಿ ನಡೆದ ಪ್ರತಿಭಟನೆಯಲ್ಲಿ ರಸ್ತೆ ಅಭಿವೃದ್ಧಿಯ ಗುತ್ತಿಗೆಪಡೆದ ಆರ್ ಎನ್ ಎಸ್ ಕಂಪನಿ ವಿರುದ್ಧ ಜನ ಆಕ್ರೋಶವ್ಯಕ್ತಪಡಿಸಿದ್ದಾರೆ. ಜಿಲ್ಲಾಡಳಿತ ಹಾಗೂ ಹೆದ್ದಾರಿ ಪ್ರಾಧಿಕಾರದ ವಿರುದ್ಧವೂ ಪ್ರತಿಭಟನಾಕಾರರು ಧಿಕ್ಕಾರ ಕೂಗಿದ್ದಾರೆ. `ಶಿರಸಿ – ಕುಮಟಾ ರಸ್ತೆ ಕಾಮಗಾರಿ ಬೇಗ ಮುಗಿಸಬೇಕು’ ಎಂದು ಅಲ್ಲಿದ್ದವರು ಆಗ್ರಹಿಸಿದ್ದಾರೆ.
`ಅಧಿಕೃತ ಆದೇಶವಿಲ್ಲದೇ ಗುತ್ತಿಗೆ ಕಂಪನಿ ಹೆದ್ದಾರಿ ಬಂದ್ ಮಾಡಿದೆ’ ಎಂದು ದೂರಿದ್ದಾರೆ. `ಹೆದ್ದಾರಿ ಬಂದ್ ಮಾಡಿದವರ ವಿರುದ್ಧ ಕ್ರಮವಾಗಬೇಕು’ ಎಂದು ಆಗ್ರಹಿಸಿ ಪ್ರತಿಭಟನಾಕಾರರು ಐದು ನಿಮಿಷಗಳ ಕಾಲ ರಸ್ತೆ ತಡೆ ನಡೆಸಿದ್ದಾರೆ. ಈ ವೇಳೆ `ಭೂಸ್ವಾಧೀನ ಪ್ರಕ್ರಿಯೆ, ಮರ ಕಟಾವಿಗೆ ಅನುಮತಿ ಹಾಗೂ ಇನ್ನಿತರ ಕಾರಣದಿಂದ ಕೆಲಸ ನಿಧಾನವಾಗಿದೆ. ಶೀಘ್ರದಲ್ಲಿಯೇ ಕೆಲಸ ಮುಗಿಯಲಿದೆ’ ಎಂದು ಆರ್ ಎನ್ ಎಸ್ ನ ಜನರಲ್ ಮ್ಯಾನೇಜರ್ ನಿತೀಶ ಶೆಟ್ಟಿ ಅವರು ಪ್ರತಿಭಟನಾಕಾರರು ಸಮಾಧಾನ ಮಾಡಿದ್ದಾರೆ.
`ಖಾಸಗಿ ಬಸ್ಸು, ಟ್ಯಾಂಕರ್, ಲಾರಿ ಓಡಾಟ ಜೋರಾಗಿದೆ. ಆದರೆ, ಬಡವರು ಸಂಚರಿಸುವ ಸರ್ಕಾರಿ ಬಸ್ಸು ಓಡಾಟಕ್ಕೆ ಅವಕಾಶ ನೀಡುತ್ತಿಲ್ಲ’ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ. `ಡಿಸೆಂಬರ್ 20ರ ಒಳಗೆ ದೇವಿಮನೆ ಘಟ್ಟ ಪ್ರದೇಶದಲ್ಲಿನ ಬಾಕಿ ಕೆಲಸ ಮುಗಿಸಿ ಬಸ್ ಓಡಾಟಕ್ಕೆ ಅನುವು ಮಾಡಿಕೊಡುತ್ತೇವೆ’ ಎಂದು ಕಂಪನಿಯವರು ಸಮಜಾಯಿಶೀ ನೀಡಿದ್ದಾರೆ. ಸ್ಥಳಕ್ಕೆ ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್ ಆಗಮಿಸಿದ್ದು, `ಸ್ಥಳೀಯ ಬಸ್ ಸಂಚಾರಕ್ಕೆ ಅವಕಾಶ ಕೊಡಬೇಕು’ ಎಂದು ಜನ ಆಗ್ರಹಿಸಿದ್ದಾರೆ.
ಈ ಹೋರಾಟದಲ್ಲಿ ಭಾಸ್ಕರ್ ಪಟಗಾರ ಅವರಿಗೆ ಬಾಲಕೃಷ್ಣ ನಾಯ್ಕ, ಮಹೇಂದ್ರ ನಾಯ್ಕ, ವಿಕ್ರಮ್ ನಾಯ್ಕ ಹೊನ್ನಾವರ, ಜಿ ಎನ್ ಗೌಡ ಹೊನ್ನಾವರ, ರಾಜು ಮಾಸ್ತಿಹಳ್ಳ, ದೀಪಕ ನಾಯ್ಕ, ಕೃಷ್ಣ ಗೌಡ, ಶಿವರಾಮ ಹರಿಕಂತ್ರ, ಬಲೀಂದ್ರ ಗೌಡ, ಗಜು ನಾಯ್ಕ ಅಳ್ವೆಕೊಡಿ, ಮಂಜುನಾಥ ನಾಯ್ಕ, ಜಿ ಜಿ ಹೆಗಡೆ ಅಂತ್ರವಳ್ಳಿ, ತಿಮ್ಮಪ್ಪ ಮುಕ್ರಿ ಸೇರಿ ನೂರಾರು ಜನ ಬೆಂಬಲ ನೀಡಿದ್ದಾರೆ.