ಆರು ವರ್ಷಗಳ ನಂತರ ಮುಂಡಗೋಡಿಗೆ ಬಂದಿರುವ ಟಿಬೇಟಿಯನ್ ಧರ್ಮ ಗುರು ದಲಾಯಿಲಾಮ ಅವರು `ನಾನು 130 ವರ್ಷ ಬದುಕುತ್ತೇನೆ’ ಎಂದು ಭವಿಷ್ಯ ನುಡಿದಿದ್ದಾರೆ!
ಹುಬ್ಬಳ್ಳಿಯಿಂದ ತಡಸ್ ಮಾರ್ಗವಾಗಿ ದಲಾಯಿಲಾಮ ಅವರು ಮುಂಡಗೋಡಿಗೆ ಬಂದಿದ್ದಾರೆ. ಟಿಬೇಟಿಯನ್ ಕ್ಯಾಂಪಿಗೆ ಆಗಮಿಸಿದ ದಲಾಯಿಲಾಮ ಅವರಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. ಇಲ್ಲಿ 45 ದಿನಗಳ ಕಾಲ ತಂಗಲು ಅವರು ನಿರ್ಧರಿಸಿದ್ದಾರೆ. ವಿಶ್ರಾಂತಿಗಾಗಿ ಅವರು ಮುಂಡಗೋಡಿಗೆ ಆಗಮಿಸಿದರಾದರೂ ಧರ್ಮ ಕಾರ್ಯದಲ್ಲಿ ಅವರು ತಮ್ಮನ್ನು ತೊಡಗಿಸಿಕೊಳ್ಳಲಿದ್ದಾರೆ. ಬೌದ್ಧ ಬಿಕ್ಕುಗಳ ಜೊತೆ ಅವರು ಕಾಲ ಕಳೆಯಲಿದ್ದಾರೆ. ಅವರ ಭದ್ರತೆಗಾಗಿ ಪೊಲೀಸರು ಕಾವಲು ಕಾಯುತ್ತಿದ್ದಾರೆ.
ಕ್ಯಾಂಪ್ ನಂ 6ರಲ್ಲಿನ ಗೋಮಾಂಗ್ ಮಾನೆಸ್ಟರಿ ಭವನದಲ್ಲಿ ಬೌದ್ಧ ಬುಕ್ಕುಗಳ ಜೊತೆ ಮಾತನಾಡಿದ ದಲಾಯಿಲಾಮ ಅವರು `ನಾನು 130 ವರ್ಷ ಬದುಕುತ್ತೇನೆ’ ಎಂದಿದ್ದಾರೆ. `ಟಿಬೇಟಿಯನ್ನರ ರಕ್ಷಣೆಗಾಗಿ ತಾನೂ 130 ವರ್ಷ ಬದುಕುವುದು ಅನಿವಾರ್ಯ’ ಎಂತಲೂ ಅವರು ಪ್ರತಿಪಾದಿಸಿದ್ದಾರೆ. `ಟಿಬೇಟಿಯನ್ನರ ಪರಂಪರೆ ಹಾಳು ಮಾಡಲು ಚೀನಾ ಪ್ರಯತ್ನಿಸಿತು. ಚೀನಾ ಎಲ್ಲಾ ರೀತಿಯ ಪ್ರಯತ್ನ ನಡೆಸಿದರೂ ಅದಕ್ಕೆ ಟಿಬೇಟಿಯನ್ನರು ಸೋಲಲಿಲ್ಲ. ಭಾರತ ಟಿಬೇಟಿಯನ್ನಿಯರಿಗೆ ನೆಲೆ ಕೊಟ್ಟಿದೆ. ಇಲ್ಲಿ ನಳಂದಾ ಸಂಪ್ರದಾಯವನ್ನು ನಾವು ಮುಂದುವರೆಸಿದ್ದೇವೆ’ ಎಂದು ದಲಾಯಿಲಾಮ ಅವರು ಸ್ಮರಿಸಿದರು.
ಅದಾದ ನಂತರ `ಟಿಬೇಟಿಯನ್ನರ ಸಂಪ್ರದಾಯ ಹಾಗೂ ಪರಂಪರೆ ಉಳಿಸಿಕೊಳ್ಳಲು ನಾವು ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಇವತ್ತಿನವರೆಗೂ ಅದನ್ನು ನಾವು ಉಳಿಸಿಕೊಂಡಿದ್ದು, ನಾನು 130ವರ್ಷದವರೆಗೆ ಜೀವಿಸಿ ಅದನ್ನು ಕಾಪಾಡುತ್ತೇನೆ’ ಎನ್ನುತ್ತ ಮಂದಹಾಸ ಬೀರಿದರು.