ಹಳಿಯಾಳದ ಪರಶುರಾಮ ವಡ್ಡರ್ ಅವರು ಇಲಿ ಪಾಷಣ ಸೇವಿಸಿದ ಪರಿಣಾಮ ಸಾವನಪ್ಪಿದ್ದಾರೆ. ಅವರನ್ನು ಉಳಿಸಿಕೊಳ್ಳುವುದಕ್ಕಾಗಿ ಕುಟುಂಬದವರು ಮೂರು ಆಸ್ಪತ್ರೆಗೆ ಕರೆದೊಯ್ದರೂ ಬದುಕಿಸಲು ಸಾಧ್ಯವಾಗಲಿಲ್ಲ.
ಹಳಿಯಾಳದ ಸಿದ್ದರಾಮೇಶ್ವರಗಲ್ಲಿಯಲ್ಲಿ ಪರಶುರಾಮ ವಡ್ಡರ್ (45) ಅವರು ವಾಸವಾಗಿದ್ದರು. ಸರಾಯಿ ಸೇವನೆ ವ್ಯಸನಕ್ಕೆ ಒಳಗಾಗಿದ್ದ ಅವರು ಸೆಪ್ಟೆಂಬರ್ 26ರ ರಾತ್ರಿ ಮನೆಯಲ್ಲಿದ್ದ ಇಲಿ ಪಾಷಣ ಸೇವಿಸಿದ್ದರು. ಸೆ 27ರ ಬೆಳಗ್ಗೆ ಅವರು ವಿಲವಿಲ ಒದ್ದಾಡುತ್ತಿದ್ದು, ಇದನ್ನು ನೋಡಿದ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದರು.
ಮೊದಲು ಪರಶುರಾಮ ವಡ್ಡರ್ ಅವರನ್ನು ಹಳಿಯಾಳ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು. ನಂತರ ಅವರನ್ನು ಧಾರವಾಡ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಅದಾದ ಮೇಲೆ ಹುಬ್ಬಳ್ಳಿಗೆ ಕರೆದೊಯ್ದು ಅಲ್ಲಿನ ಕಿಮ್ಸ್ ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಯಿತು. ಆದರೆ, ಇಲಿ ಪಾಷಣ ಸೇವಿಸಿ 10 ತಾಸು ಕಳೆದಿತ್ತು. ಹೀಗಾಗಿ ಅವರನ್ನು ಬದುಕಿಸಿಕೊಳ್ಳಲು ಆಗಲಿಲ್ಲ.
ಪರಶುರಾಮ ವಡ್ಡರ್ ಅವರ ಸಾವಿನ ಬಗ್ಗೆ ಕೃಷ್ಣ ವಡ್ಡರ್ ಅವರು ಪೊಲೀಸರಿಗೆ ತಿಳಿಸಿದರು. ಹಳಿಯಾಳ ಪೊಲೀಸರು ಪ್ರಕರಣ ದಾಖಲಿಸಿದರು.