ತಮ್ಮ ವಿಭಿನ್ನ ಶೈಲಿಯ ಮೂಲಕ ಗಮನಸೆಳೆಯುವ ಯಲ್ಲಾಪುರದ ನ್ಯಾಯವಾದಿ ಗಣೇಶ ಪಾಠಣಕರ್ ಅವರು ಬಿಜೆಪಿ ಸೇರಿದ್ದಾರೆ. ಶುಕ್ರವಾರ ಬಿಜೆಪಿಯ ಶಾಲು ಹೊದ್ದು ಅವರು ಮಾಧ್ಯಮದವರ ಮುಂದೆ ಕಾಣಿಸಿಕೊಂಡಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಮಂಡಳ ಅಧ್ಯಕ್ಷ ಪ್ರಸಾದ ಹೆಗಡೆ ಕಿಡಿಕಾರಿದ್ದಾರೆ. `ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್ ದುರಾಡಳಿತದ ಬಗ್ಗೆ ಪಟ್ಟಣದ ಮನೆ ಮನೆಗೆ ತೆರಳಿ ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಈ ಬಗ್ಗೆ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ’ ಎಂದು ಪ್ರಸಾದ ಹೆಗಡೆ ಘೋಷಿಸಿದ್ದಾರೆ. ಅಭಿಯಾನದ ಕರಪತ್ರ ಬಿಡುಗಡೆ ಮಾಡಿದ ಅವರು `ಕಾಂಗ್ರೆಸ್ ಆಡಳಿತದಲ್ಲಿ ಪಟ್ಟಣದ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಈ ಬಗ್ಗೆ ಮನೆ ಮನೆಗೆ ಹೋಗಿ ಜನರಿಗೆ ತಿಳಿಸುವ ಜೊತೆಗೆ ಮೋದಿ ಸರ್ಕಾರದ ಸಾಧನೆಗಳ ಬಗ್ಗೆಯೂ ಮಾಹಿತಿ ನೀಡಲಾಗುತ್ತದೆ’ ಎಂದಿದ್ದಾರೆ.
`ಕೆರೆಗಳ ಅಭಿವೃದ್ಧಿಗೆ ಪ ಪಂ ಆಡಳಿತ ಮುಂದಾಗಿಲ್ಲ. ಹಿಂದು ರುದ್ರಭೂಮಿಯನ್ನು ಕಡೆಗಣಿಸಲಾಗಿದೆ. ಹಂದಿ, ಬೀದಿ ನಾಯಿಗಳ ಕಾಟ ಹೆಚ್ಚಿದೆ. ಕುಡಿಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿಲ್ಲ. ಟ್ರಾಫಿಕ್ ವ್ಯವಸ್ಥೆ ಸರಿಯಾಗಿಲ್ಲ. ಬೀದಿಗಳಲ್ಲಿ ಮೀನು ಮಾರಾಟ ನಡೆಯುತ್ತಿದೆ. ಪ.ಪಂ ಆಡಳಿತದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಜಿ+2 ಮನೆಗಳ ಹಂಚಿಕೆಯಾಗಿಲ್ಲ’ ಎಂದು ಬಿಜೆಪಿಗರು ದೂರಿದ್ದಾರೆ.
ಪ ಪಂ ಮಾಜಿ ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಪಕ್ಷದ ಮುಖಂಡ ರಾಮು ನಾಯ್ಕ, ಪಕ್ಷದ ಪದಾಧಿಕಾರಿಗಳಾದ ಶ್ರೀನಿವಾಸ ಗಾಂವ್ಕರ, ರಜತ ಬದ್ದಿ, ರಜನಿ ಚಂದ್ರಶೇಖರ, ತುಳಸಿದಾಸ ನಾಯ್ಕ, ರವಿ ದೇವಡಿಗ, ಬಾಬಣ್ಣ ದೇಸಾಯಿ, ವಿನಾಯಕ ಪತ್ತರ್, ಉಲ್ಲಾಸ ಕೊಂಡೆಮನೆ, ನಯನ ಇಂಗಳೆ, ಆದಿತ್ಯ ಗುಡಿಗಾರ, ಗಜಾನನ ನಾಯ್ಕ ತಳ್ಳಿಕೇರಿ ಸಹ ಕಾಂಗ್ರೆಸ್ ಆಡಳಿತದ ಬಗ್ಗೆ ಬೇಸರಿಸಿದ್ದಾರೆ.