ರಫೀಕ್ ದಾಳಿಯಿಂದ ತತ್ತರಿಸಿದ್ದ ರಂಜಿತಾ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಅವರ ಸಹಾಯಕ್ಕೆ ಯಾರೂ ಬಂದಿರಲಿಲ್ಲ. ಆಗ, ಅದೇ ಊರಿನ ಚಂದ್ರಣ್ಣ ತಮ್ಮ ಆಟೋವನ್ನು ಆಂಬುಲೆನ್ಸ್ ಆಗಿ ಪರಿವರ್ತಿಸಿ ರಂಜಿತಾ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಚಂದ್ರಶೇಖರ ಬೋವಿವಡ್ಡರ್ ಅವರು ಯಲ್ಲಾಪುರ ಬಸ್ ನಿಲ್ದಾಣ ಬಳಿಯ ಆಟೋ ಸ್ಟಾಂಡಿನ ಉಪಾಧ್ಯಕ್ಷರಾಗಿದ್ದಾರೆ. ಚಂದ್ರಶೇಖರ್ ಬೋವಿವಡ್ಡರ್ ಅವರು ಅಧ್ಯಕ್ಷರಾಗಿರುವ ರಾಮಾಪುರ ಸರ್ಕಾರಿ ಶಾಲೆಯಲ್ಲಿಯೇ ರಂಜಿತಾ ಬನ್ಸೋಡೆ ಅವರು ಅಡಿಗೆ ಸಹಾಯಕಿ ಆಗಿ ಕೆಲಸ ಮಾಡುತ್ತಿದ್ದರು. ರಂಜಿತಾ ಬನ್ಸೋಡೆ ಹಾಗೂ ಚಂದ್ರಶೇಖರ್ ಬೋವಿವಡ್ಡರ್ ಅವರ ಮನೆ ಅಕ್ಕಪಕ್ಕದಲ್ಲಿಯೇ ಇದ್ದು, ಘಟನೆ ನಡೆದ ವೇಳೆ ಚಂದ್ರಶೇಖರ್ ಬೋವಿವಡ್ಡರ್ ಅವರು ಶಾಲೆಯಿಂದ ಮನೆಗೆ ಮರಳುತ್ತಿದ್ದರು. ಈ ವೇಳೆ ರಂಜಿತಾ ಅವರು ರಕ್ತದ ಮೊಡವಿನಲ್ಲಿ ಬಿದ್ದಿರುವ ಬಗ್ಗೆ ಚಂದ್ರಶೇಖರ್ ಬೋವಿವಡ್ಡರ್ ಅವರಿಗೆ ಫೋನ್ ಬಂದಿದ್ದು, ತಕ್ಷಣ ಅವರು ಆಸ್ಪತ್ರೆಯ ಕಡೆ ಆಟೋ ತಿರುಗಿಸಿದರು.
ಎರಡು ತಾಸು ಕಾದು ಕೊಲೆ ಮಾಡಿದ: ಸಂಘದ ಸಾಲ ವಸೂಲಿಗೆ ರಂಜಿತಾರ ಮನೆ ಕಡೆ ಬರುತ್ತಿದ್ದ ರಫೀಕ್ ಆ ಕುಟುಂಬದವರ ಜೊತೆಯೂ ಆತ್ಮೀಯ ಸಂಬoಧ ಹೊಂದಿದ್ದರು. ಜಿಂಕೆ ಕೊಂದ ಪ್ರಕರಣದಲ್ಲಿಯೂ ಆರೋಪಿಯಾಗಿದ್ದು, ವಿಪರೀತ ಪ್ರಮಾಣದಲ್ಲಿ ವಿವಿಧ ವ್ಯಸನಹೊಂದಿದ್ದರು. ವ್ಯಸನಕ್ಕೆ ಬೇಸತ್ತು ರಂಜಿತಾ ರಫೀಕ್ ಅವರಿಂದ ದೂರವಾಗಿದ್ದರು. ರಂಜಿತಾ ದೂರವಾದ ಕಾರಣ ರಫೀಕ್ ಸಿಟ್ಟಾಗಿದ್ದು, ಮದುವೆ ಆಗುವಂತೆ ಪೀಡಿಸುತ್ತಿದ್ದರು. ಮದುವೆಗೆ ಒಪ್ಪದ ಕಾರಣ ಕೊಲೆ ಮಾಡುವ ನಿರ್ಧಾರಕ್ಕೆ ಬಂದಿದ್ದರು. ಕೊಲೆ ಮಾಡುವುದಕ್ಕೆ ಸಂಚು ರೂಪಿಸಿಯೇ ಬಂದಿದ್ದ ರಫೀಕ್, ರಂಜಿತಾರಿಗೆ ಹಿಂಸಿಸಲು ಎರಡು ತಾಸು ಕಾದಿದ್ದರು.
ರಂಜಿತಾ ಅವರ ಮನೆ ಬಳಿಯಿರುವ ಗೂಡಂಗಡಿಯಲ್ಲಿ ರಫೀಕ್ ಕಾಯುತ್ತಿರುವುದನ್ನು ಜನ ಗಮನಿಸಿದ್ದರು. ಬೆಳಗ್ಗೆ 11.30ರ ಸುಮಾರಿಗೆ ಅಂಗಡಿ ಬಳಿ ಬಂದಿದ್ದ ರಫೀಕ್ ಅವರನ್ನು ಅದೇ ಭಾಗದ ಸಂತೋಷ ಭಾಗವತಕರ್ ಅವರು ಮಾತನಾಡಿಸಿದ್ದರು. ಆದರೆ, ಆಗಾಗ ಅಲ್ಲಿ ಬರುತ್ತಿದ್ದ ರಫೀಕ್ ಈ ಬಾರಿ ರಂಜಿತಾ ಅವರನ್ನು ಕೊಲೆ ಮಾಡುವ ಬಗ್ಗೆ ಯಾರೂ ಊಹಿಸಿರಲಿಲ್ಲ. ರಂಜಿತಾ ಅವರು ರಕ್ತದ ಮೊಡವಿನಲ್ಲಿ ಬಿದ್ದಿರುವ ಬಗ್ಗೆ ಕುಟುಂಬದವರು ಆಂಬುಲೆನ್ಸಿಗೆ ಫೋನ್ ಮಾಡಿದರೂ ಸಕಾಲದಲ್ಲಿ ಆಂಬುಲೆನ್ಸ ಸಿಗಲಿಲ್ಲ. 20 ನಿಮಿಷ ಕಳೆದರೂ ಆಂಬುಲೆನ್ಸ ಬಾರದ ವಿಷಯ ತಿಳಿದ ಸಂತೋಷ ಭಾಗವತಕರ್ ಅವರು ಅಲ್ಲಿಗೆ ದೌಡಾಯಿಸಿದ್ದು, ಆ ವೇಳೆ ಅಲ್ಲಿಗೆ ಬಂದಿದ್ದ ಚಂದ್ರಶೇಖರ ಬೋವಿವಡ್ಡರ್ ಅವರ ಆಟೋ ಒಳಗೆ ರಂಜಿತಾ ಅವರನ್ನು ಕೂರಿಸಿದರು. ಆ ವೇಳೆಗಾಗಲೇ ಪೇಟೆಗೆ ಹೋಗಿದ್ದ ರಂಜಿತಾ ಅವರ ಅಣ್ಣ ವೀರಭದ್ರ, ಅವರ ತಾಯಿ ಭಾಗೀರಥಿ, ತಂಗಿ ಅಕ್ಷತಾ ಸಹ ಆಟೋ ಮೇಲೆರಿದ್ದು ಚಂದ್ರಣ್ಣ ಅವರು ಗಾಯಾಳುವನ್ನು ಆಸ್ಪತ್ರೆಗೆ ಕರೆದೊಯ್ದರು.
`ರಂಜಿತಾ ಅವರನ್ನು ಬದುಕಿಸಿಕೊಳ್ಳಲು ಸಾಕಷ್ಟು ಶ್ರಮವಹಿಸಿದರೂ ಪ್ರಯೋಜನವಾಗಲಿಲ್ಲ. ತಕ್ಷಣಕ್ಕೆ ಆಂಬುಲೆನ್ಸ ಸಿಗದಿರುವುದು ಸಮಸ್ಯೆಯಾಯಿತು’ ಎಂದು ಚಂದ್ರಶೇಖರ ಬೋವಿವಡ್ಡರ್ ಹಾಗೂ ಸಂತೋಷ ಭಾಗವತಕರ್ ಅವರು ವಿವರಿಸಿದರು.