ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಅರಣ್ಯ ಹಕ್ಕು ಅರ್ಜಿ ಪುನರ್ ಪರಿಶೀಲನೆ ನಡೆಯದ ಕಾರಣ ಅಕ್ಟೊಬರ್ 4ರಂದು ಶಿರಸಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಮೇಲ್ಮನವಿ ಅಭಿಯಾನ ನಡೆಸಲು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ನಿರ್ಧರಿಸಿದೆ.
`ಗಾಳಿ-ಮಳೆ-ಚಳಿಯನ್ನು ಲೆಕ್ಕಿಸದೇ ಆ ದಿನ ಸಹಸ್ರ ಸಹಸ್ರ ಸಂಖ್ಯೆಯ ಜನ ಹೋರಾಟ ನಡೆಸಲು ನಿರ್ಧರಿಸಿದ್ದಾರೆ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಪ್ರಕಟಿಸಿದ್ದಾರೆ. ಸೋಮವಾರ ಪೂರ್ವಭಾವಿ ಸಭೆ ನಡೆಸಿದ ಅವರು `ಈ ಅಭಿಯಾನ ರಾಜ್ಯಮಟ್ಟದ ಐತಿಹಾಸಿಕ ಕಾರ್ಯಕ್ರಮ ಆಗಲಿದೆ. ಅರಣ್ಯವಾಸಿಗಳ ಮಹಾ ಸಂಗ್ರಾಮ ಸಾಕ್ಷಿಯಾಗಲಿದೆ’ ಎಂದಿದ್ದಾರೆ. `ರಾಜ್ಯ ಸರ್ಕಾರವು ಪುನರ್ ಪರಿಶೀಲನೆ ಜರುಗಿಸದೇ ತಿರಸ್ಕರಿಸಿದ ಅರ್ಜಿಯ ವರದಿ ಸುಪ್ರೀಂ ಕೊರ್ಟಗೆ ಸಲ್ಲಿಕೆಯಾದ ಹಿನ್ನಲೆ ಇದರ ಮುಂದಿನ ವಿಚಾರಣೆ ಅಕ್ಟೊಬರ್ 14ರಂದು ನಡೆಯಲಿದೆ’ ಎಂದು ರವೀಂದ್ರ ನಾಯ್ಕ ಅವರು ಮಾಹಿತಿ ನೀಡಿದ್ದಾರೆ.
`ಸರ್ಕಾರದ ನಿರ್ಧಾರದಿಂದ ಅರ್ಜಿ ಪುನರ್ ಪರಿಶೀಲಿಸದೇ ತಿರಸ್ಕರಿಸಲಾಗಿದೆ. ಈ ವರದಿಯಿಂದ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಪ್ರತಿಯೊಬ್ಬರಿಗೂ ಅನ್ಯಾಯವಾಗಿದೆ. ಹೀಗಾಗಿ ಅವರೆಲ್ಲರೂ ಆಕ್ಷೇಪಣೆ ಸಲ್ಲಿಸುವುದು ಅನಿವಾರ್ಯ’ ಎಂದವರು ವಿವರಿಸಿದ್ದಾರೆ.
`ಅಕ್ಟೊಬರ್ 4ರಂದು ರಾಜ್ಯ ಮಟ್ಟದ ಐತಿಹಾಸಿಕ ಕಾರ್ಯಕ್ರಮ ಸಂಘಟಿಸಲು ಅರಣ್ಯವಾಸಿಗಳು ನಿರ್ಧರಿಸಿದ್ದಾರೆ’ ಎಂದು ಸಂಘಟನೆ ಜಿಲ್ಲಾ ಸಂಚಾಲಕ ಇಬ್ರಾಹೀಂ ಗೌಡಳ್ಳಿ ಹೇಳಿದರು. ಪ್ರಮುಖರಾದ ನೆಹರು ನಾಯ್ಕ ಬಿಳೂರು, ಎಮ್ ಆರ್ ನಾಯ್ಕ ಕಂಡ್ರಾಜಿ, ಚಂದ್ರು ಶಾನಭಾಗ ಬಂಡಲ್, ಪರಮೇಶ್ವರ ಗೌಡ ಕುದರಗೋಡ, ರಾಜು ನರೇಬೈಲ್, ಅಬ್ದುಲ್ ರಫೀಕ್, ಶಂಭು ದೇವು ಮರಾಠಿ, ತಿಮ್ಮ ಗಣಪತಿ ಗೌಡ, ಗುಲಾಬ್ ಭಾಷಾ ಉಂಚಳ್ಳಿ ಇತರರು ಹೋರಾಟಕ್ಕೆ ಸಜ್ಜಾಗಿದ್ದಾರೆ.