ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕಾರವಾರದ ಮೆಡಿಕಲ್ ಕಾಲೇಜು ಆವರಣದ ಸರ್ಕಾರಿ ಆಸ್ಪತ್ರೆ ಕಾಮಗಾರಿ ಕಳಪೆಯಾಗಿದೆ. ಉದ್ಘಾಟನೆಗೂ ಮುನ್ನವೇ ಕಟ್ಟಡದ ಕೆಲ ಭಾಗ ಕುಸಿತ ಕಂಡಿದೆ!
ಕಾರವಾರದಲ್ಲಿ ಈ ದಿನ ಭೂಕಂಪನವೂ ಆಗಿಲ್ಲ. ದೊಡ್ಡ ಸದ್ದು-ಗದ್ದಲವೂ ಕೇಳಲ್ಪಟ್ಟಿಲ್ಲ. ಆದರೂ, ಕಾರವಾರ ವೈದ್ಯಕೀಯ ವಿಜ್ಞಾನ ಕೇಂದ್ರದ ಹೊಸ ಕಟ್ಟಡ ಅಲ್ಲಾಡಿತು. ಕಟ್ಟಡದ ಗೋಡೆಗಳು ಮೊದಲೇ ಬಿರುಕು ಮೂಡಿದ್ದು, ಮಳೆಗಾಲದಲ್ಲಿ ಕಟ್ಟಡದ ಒಳಗೆ ನೀರು ಸೋರುತ್ತಿತ್ತು. ಮಂಗಳವಾರ ಮೊದಲ ಮಹಡಿ ಹಾಗೂ ಎರಡನೇ ಮಹಡಿಯ ಮೇಲ್ಚಾವಣಿ ಕುಸಿದು ಬಿದ್ದಿತು.
1980ರ ಅವಧಿಯಲ್ಲಿ ಕಾರವಾರದಲ್ಲಿ ಸಿವಿಲ್ ಆಸ್ಪತ್ರೆ ಕಟ್ಟಡ ನಿರ್ಮಿಸಲಾಗಿದ್ದು, ಅದು ಶಿಥಿಲವಾಗಿತ್ತು. ಹೀಗಾಗಿ ಹೊಸ ಕಟ್ಟಡ ಕಟ್ಟುವ ಕಾರ್ಯ ನಡೆಯಿತು. ವೈದ್ಯಕೀಯ ವಿಜ್ಞಾನ ಕಾಲೇಜು ಅಧೀನದಲ್ಲಿ 450 ಹಾಸಿಗೆಯ ಆಸ್ಪತ್ರೆ ನಿರ್ಮಿಸುವ ಕೆಲಸವನ್ನು ಬಿಎಸ್‌ಆರ್ ಕನ್ಸಟ್ರಕ್ಷನ್ ಕಂಪನಿ ಗುತ್ತಿಗೆಪಡೆಯಿತು. ಕಟ್ಟಡ ಪೂರ್ಣಗೊಳ್ಳುವ ಮೊದಲೇ ಹಳೆಯ ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಅಲ್ಲಿ ಸ್ಥಳಾಂತರಿಸಲಾಯಿತು.
ರೋಗಿಗಳು ಆ ಕಟ್ಟಡದಲ್ಲಿರುವಾಗಲೇ ಕಟ್ಟಡದ ಇನ್ನಷ್ಟು ಕಾಮಗಾರಿ ನಡೆಯುತ್ತಿತ್ತು. ಎರಡನೇ ಮಹಡಿಯ ಕೆಲಸ ಮುಂದುವರೆದಿದ್ದು, ಅಲ್ಲಿನ ಗೋಡೆಗಳು ಬಿರುಕು ಮೂಡಿದ್ದವು. ಕಟ್ಟಡದ ಅಲ್ಲಲ್ಲಿ ನೀರು ಸೋರುತ್ತಿದ್ದು, ಗೋಡೆಗಳು ಒದ್ದೆಯಾಗಿದ್ದವು. ಮಂಗಳವಾರ ಆ ಮಹಡಿಯ ಮೇಲ್ಬಾಗ ಅಳವಡಿಸಿದ್ದ ಪಿಓಪಿ ಪರದೆ ಕುಸಿದಿದೆ. ಕಟ್ಟಡದಲ್ಲಿ ನಿರ್ಮಾಣವಾಗುತ್ತಿದ್ದ ಸರ್ಜರಿ ವಿಭಾಗ ಹಾಗೂ ಶಸ್ತç ಚಿಕಿತ್ಸೆ, ಉಪನ್ಯಾಸಕರ ಕೊಠಡಿ ಭಾಗದಲ್ಲಿ ಮೇಲ್ಚಾವಣಿ ಕುಸಿತ ಉಂಟಾಗಿದೆ. ಕುಸಿತದ ಅವಧಿಯಲ್ಲಿ ಸ್ಥಳದಲ್ಲಿ ಯಾರು ಇರಲಿಲ್ಲ. ಹೀಗಾಗಿ ಪಿಓಪಿ ತುಂಡುಗಳು ತಲೆ ಮೇಲೆ ಬಿದ್ದಿಲ್ಲ.
ಜನಶಕ್ತಿಯಿಂದ ಸಾರ್ವಜನಿಕ ಹಿತಾಸಕ್ತಿ
ಈ ಕಟ್ಟಡ ಇನ್ನೂ ಉದ್ಘಾಟನೆ ಆಗಿಲ್ಲ. ಅಧಿಕೃತವಾಗಿ ಹಸ್ತಾಂತರವೂ ಆಗಿಲ್ಲ. ಅದಕ್ಕೂ ಮೊದಲೇ ಕಳಪೆ ಕಾಮಗಾರಿಯ ಪ್ರದರ್ಶನವಾಗಿದೆ. ಈ ಬಗ್ಗೆ ಮಾಹಿತಿ ಅರಿತ ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಸ್ಥಳ ಪರಿಶೀಲನೆ ಮಾಡಿದರು. ತಹಶೀಲ್ದಾರ್ ನಿಶ್ಚಲ್ ನರೋನಾ ಅವರನ್ನು ಕರೆಯಿಸಿ ಕಾಮಗಾರಿಯ ಕಳಪೆಯನ್ನು ವಿವರಿಸಿದರು. ಸುಮಾರು 200 ಕೋಟಿ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಿಸುತ್ತಿದ್ದು, ಉದ್ಘಾಟನೆಗೂ ಮುನ್ನವೇ ಗೋಡೆಗಳಲ್ಲಿ ಬಿರುಕು ಬಂದ ಬಗ್ಗೆ ಅವರು ಆಕ್ಷೇಪಿಸಿದರು. ಇಡೀ ಕಟ್ಟಡದ ಗುಣಮಟ್ಟವನ್ನು ಮರುಪರಿಶೀಲನೆಗೆ ಒಳಪಡಿಸಬೇಕು ಎಂದು ಅವರು ಜಿಲ್ಲಾಡಳಿತಕ್ಕೆ ಪತ್ರ ನೀಡಿದರು.