ಕುಮಟಾದ ಗುತ್ತಿಗೆದಾರ ವಿಶಾಲ ನಾಯಕ ಅವರು ಅಂಕೋಲಾದಲ್ಲಿ ಮನೆ ನಿರ್ಮಾಣ ಗುತ್ತಿಗೆಪಡೆದಿದ್ದು, ಮನೆ ಕಟ್ಟುವ ಸ್ಥಳದಲ್ಲಿ ಅವರು ತಂದಿರಿಸಿದ್ದ ಸಾಮಗ್ರಿಗಳನ್ನು ಕಳ್ಳರು ದೋಚಿದ್ದಾರೆ.
ಕುಮಟಾ ಬರ್ಗಿ ಕುರಿಗದ್ದೆಯ ವಿಶಾಲ ನಾಯಕ ಅವರು ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಅಂಕೋಲಾದ ಆಂದ್ಲೆಯಲ್ಲಿ ಮನೆ ನಿರ್ಮಾಣದ ಗುತ್ತಿಗೆ ಮಾಡಿಕೊಂಡಿದ್ದಾರೆ. ಈ ಹಿನ್ನಲೆ ಅಲ್ಲಿ ಕಟ್ಟಡ ಕೆಲಸ ಶುರು ಮಾಡಿದ್ದು, ಅಗತ್ಯವಿರುವ ಸಾಮಗ್ರಿಗಳನ್ನು ಕಟ್ಟಡದ ಬಳಿ ದಾಸ್ತಾನು ಮಾಡುತ್ತಿದ್ದಾರೆ.
ಮನೆ ಕೆಲಸ ವೇಗವಾಗಿ ನಡೆಯುತ್ತಿದ್ದು, ಸದ್ಯ ಸ್ಲಾಪ್ ಹಾಕುವವರೆಗೆ ಬಂದಿದೆ. ಸ್ಲಾಪ್ ಹಾಕುವುದಕ್ಕಾಗಿ ವಿಶಾಲ ನಾಯಕ ಅವರು ಕಬ್ಬಿಣದ ಪ್ಲೇಟುಗಳನ್ನು ದಾಸ್ತಾನು ಮಾಡಿದ್ದರು. ಅಗಸ್ಟ 20ರಂದು ಅವರು ಅಲ್ಲಿ ಕಬ್ಬಿಣ ತಂದು ರಾಶಿ ಹಾಕಿದ್ದರು. ಸೆಪ್ಟೆಂಬರ್ 21ರಂದು ವಿಶಾಲ ನಾಯಕ ಅವರು ಕಟ್ಟಡದ ಬಳಿ ಹೋದಾಗ ಅಲ್ಲಿ ದಾಸ್ತಾನು ಮಾಡಿದ್ದ ಕಬ್ಬಿಣ ಕಾಣೆಯಾಗಿತ್ತು.
ಸೆಂಟ್ರಿAಗ್ ಕೆಲಸಕ್ಕೆ ಅಗತ್ಯವಿದ್ದ 58 ಪ್ಲೇಟುಗಳನ್ನು ಕಳ್ಳರು ಎಗರಿಸಿದ್ದರು. ಜೊತೆಗೆ ಅಲ್ಲಿದ್ದ ಶೆಡ್ಡನ್ನು ಮುರಿದಿದ್ದರು. ಶೆಡ್ಡಿನ ಒಳಗಿದ್ದ ರಾಡ್ ಕಟಿಂಗ್ ಮಿಶನ್, ಸುತ್ತಿಗೆ, ಕಬ್ಬಿಣದ ಲಿವರ್’ನ್ನು ಅಪಹರಿಸಿದ್ದರು. ಇದರಿಂದ ಸುಮಾರು 30 ಸಾವಿರ ರೂ ನಷ್ಟ ಅನುಭವಿಸಿದ ವಿಶಾಲ ನಾಯಕ ಅವರು ಕಳ್ಳರ ಪತ್ತೆಗಾಗಿ ಪೊಲೀಸರ ಮೊರೆ ಹೋದರು. ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿದ್ದಾರೆ.