ಅಂಕೋಲಾದ ಕೇಣಿಯಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣದ ವಿರುದ್ಧ ಧ್ವನಿ ಜೋರಾಗಿದೆ. ಭಾವಿಕೇರಿ ಗ್ರಾಮ ಸಭೆಯಲ್ಲಿ ಮೀನುಗಾರರ ಜೊತೆ ಸಾರ್ವಜನಿಕರು ಕೈ ಜೋಡಿಸಿದ್ದು, ಬಂದರು ವಿರುದ್ಧ ಠರಾವು ಮಾಡಲು ಹಕ್ಕೊತ್ತಾಯ ಮಾಡಿದರು.
`ಕೇಣಿಯಲ್ಲಿ ಬೃಹತ್ ವಾಣಿಜ್ಯ ಬಂದರು ಬೇಡ ಎಂದು ಗ್ರಾಪಂ ಆಡಳಿತ ಮಂಡಳಿ ಠರಾವು ಪಾಸು ಮಾಡಬೇಕು. ಈ ನಿರ್ಣಯವನ್ನು ಎಲ್ಲರ ಮುಂದೆ ಓದಬೇಕು’ ಎಂದು ಕೇಣಿ ಭಾಗದ ಮೀನುಗಾರ ಪ್ರಮುಖ ಸಂಜೀವ ಬಲೆಗಾರ ಅವರು ಗ್ರಾಮ ಸಭೆಯಲ್ಲಿ ಅಧ್ಯಕ್ಷರು ಮತ್ತು ಅಧಿಕಾರಿಗಳನ್ನು ಒತ್ತಾಯಿಸಿದರು. ಅನೇಕರು ಇದಕ್ಕೆ ಬೆಂಬಲವ್ಯಕ್ತಪಡಿಸಿದರು. ಮೀನುಗಾರರು ಹಾಗೂ ರೈತರು ಇದೇ ಗ್ರಾಮ ಸಭೆಯಲ್ಲಿ `ಠರಾವು ಪಾಸು ಮಾಡಬೇಕು’ ಎಂದು ಪಟ್ಟು ಹಿಡಿದರು.
`ಭಾವಿಕೇರಿ ಗ್ರಾಪಂ ವ್ಯಾಪ್ತಿಯಲ್ಲಿ 400 ಮೀನುಗಾರ ಕುಟುಂಬಗಳ ಸಹಿತ 8000 ದಷ್ಟು ಜನಸಂಖ್ಯೆ ಇದ್ದರೂ ವರದಿಯ ಪ್ರಕಾರ ಸಿಆರಝೆಡ್ ವ್ಯಾಪ್ತಿಯಲ್ಲಿ ಜನವಸತಿ ಇಲ್ಲದ ಬಂಜರು ಭೂಮಿ ಎಂದು ಉಲ್ಲೇಖಿಸಲಾಗಿದೆ. ಹಾಗಾದರೆ ಗ್ರಾಮ ಪಂಚಾಯತ ಪ್ರಕಾರ ಇಲ್ಲಿ ಜನ ಬದುಕಿದ್ದಾರೋ? ಇಲ್ಲ ಸತ್ತಿದ್ದಾರೋ?’ ಎಂದು ಜನ ಪ್ರಶ್ನಿಸಿದರು. `JSW ಕಂಪನಿ ಸುಳ್ಳನ್ನೇ ಬಂಡವಾಳವಾಗಿಟ್ಟುಕೊAಡು ಬಂದರು ನಿರ್ಮಾಣಕ್ಕೆ ಮುಂದಾಗಿದೆ. ಯಾವುದೇ ಬಂದರು ಬರಲು ಬಿಡುವುದಿಲ್ಲ’ ಎಂದು ಜನ ಹೇಳಿದರು.
ಮೀನುಗಾರಿಕಾ ಇಲಾಖೆಯ ತಾಲೂಕಾಮಟ್ಟದ ಅಧಿಕಾರಿಗಳು ಗ್ರಾಮ ಸಭೆಯಿಂದ ದೂರವುಳಿದ ಬಗ್ಗೆ ಆಕ್ರೋಶವ್ಯಕ್ತವಾಯಿತು. ಮೀನುಗಾರಿಕಾ ಇಲಾಖೆಯವರನ್ನು ಕರೆಯಿಸಿ ಪ್ರತ್ಯೇಕ ಸಭೆ ನಡೆಸುವಂತೆ ಜನ ಒತ್ತಾಯಿಸಿದರು. ಕೊನೆಗೆ ಗ್ರಾಪಂ ಅಧ್ಯಕ್ಷೆ ದೀಪಾ ನಾಯಕ ಮಾತನಾಡಿ `ಮೀನುಗಾರರಿಂದಹಿಡಿದು ಪ್ರತಿಯೊಬ್ಬರಿಗೂ ಸಮಸ್ಯೆಯಾಗುತ್ತದೆ. ನಿಮ್ಮ ಹೊರತಾಗಿ ನಾನು ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ. ನಿಮ್ಮ ನಿರ್ಣಯವೇ ನನ್ನ ನಿರ್ಣಯವಾಗಿರುತ್ತದೆ’ ಎಂದರು. `ನಮ್ಮ ಗ್ರಾಪಂ ವ್ಯಾಪ್ತಿಯಲ್ಲಿ ಈ ಬಂದರು ಬೇಡ’ ಎಂದು ಠರಾವು ಮಾಡಲು ಒಪ್ಪಿಗೆ ಸೂಚಿಸಿದರು.
ನೋಡಲ್ ಅಧಿಕಾರಿ ವಿನಾಯಕ ನಾಯ್ಕ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಹಾದೇವ ಗೌಡ, ಗ್ರಾಪಂ ಉಪಾಧ್ಯಕ್ಷೆ ಅನಿತಾ ನಾಯಕ, ಸದಸ್ಯರಾದ ಪಾಂಡು ಗೌಡ, ಸುಕ್ರು ಗೌಡ, ವೆಂಕಟೇಶ ಹರಿಕಂತ್ರ, ಜ್ಞಾನೇಶ್ವರ ಹರಿಕಂತ್ರ, ಕಮಲಾ ಆಗೇರ್ ಇತರರು ಬಂದರು ವಿರೋಧಿ ವಿಷಯವಾಗಿ ಮಾತನಾಡಿದರು.