ಬಿಜೆಪಿ ಬೆಂಬಲಿತ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದವರು ಶಿರಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎದುರು ಪ್ರತಿಭಟಿಸಿದ್ದು, ಶಾಸಕ ಭೀಮಣ್ಣ ನಾಯ್ಕ ಅವರು ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದ್ದಾರೆ.
ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಅರಿತ ಭೀಮಣ್ಣ ನಾಯ್ಕ ಅವರು ತಮ್ಮ ಕೆಲಸ ಕಾರ್ಯ ಮೊಟಕುಗೊಳಿಸಿ ಕಾಲೇಜಿನ ಬಳಿ ಆಗಮಿಸಿದರು. `ಕಾಲೇಜು ಪ್ರಾರಂಭವಾಗಿ ತಿಂಗಳು ಕಳೆದರೂ ಅತಿಥಿ ಉಪನ್ಯಾಸಕರ ನೇಮಕವಾಗಿಲ್ಲ. ಹೀಗಾಗಿ ತರಗತಿಗಳು ಸರಿಯಾಗಿ ನಡೆಯುತ್ತಿಲ್ಲ’ ಎಂದು ವಿದ್ಯಾರ್ಥಿಗಳು ಶಾಸಕರ ಗಮನಕ್ಕೆ ತಂದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ವಿಭಾಗ ಸಂಚಾಲಕರಾದ ಸಂಜಯ್ ಗಾಂವಕಾರ ಅವರು ಸರ್ಕಾರದ ನಡೆಯನ್ನು ಖಂಡಿಸಿದರು. `ಸರ್ಕಾರಿ ಕಾಲೇಜುಗಳಲ್ಲಿ ಸರಿಯಾದ ಶಿಕ್ಷಣ ಸಿಗದ ಕಾರಣ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ. ಗ್ಯಾರಂಟಿ ಸರ್ಕಾರ ಈಗ ಏನು ಮಾಡುತ್ತಿದೆ? ಎಂದವರು ಪ್ರಶ್ನಿಸಿದರು. ಈ ವೇಳೆ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರಿಗೂ ವಿದ್ಯಾರ್ಥಿಗಳು ಫೋನ್ ಮಾಡಿದರು. ಆದರೆ, ಮಂಕಾಳು ವೈದ್ಯ ಅವರು ಫೋನ್ ಕರೆ ಸ್ವೀಕರಿಸಲಿಲ್ಲ.
ಹೀಗಾಗಿ ಪ್ರತಿಭಟನಾಕಾರರು ಇನ್ನಷ್ಟು ಆಕ್ರೋಶವ್ಯಕ್ತಪಡಿಸಿದರು. `ಬಡ ವಿದ್ಯಾರ್ಥಿಗಳ ಬಗ್ಗೆ ಜನಪ್ರತಿನಿಧಿಗಳಿಗೆ ಕಿಂಚಿತ್ತು ಕಾಳಜಿಯಿಲ್ಲ’ ಎಂದು ರಿತೇಶ ಶಾನಭೋಗ ಬೇಸರವ್ಯಕ್ತಪಡಿಸಿದರು. `ಸಮಸ್ಯೆ ಪರಿಹಾರ ಆಗದೇ ಇದ್ದರೆ ಶಾಸಕರ ಕಚೇರಿ ಎದುರು ಪ್ರತಿಭಟಿಸುತ್ತೇವೆ’ ಎಂದು ಶಶಾಂಕ್ ನಾಯ್ಕ ಎಚ್ಚರಿಸಿದರು.
`ಈಗಾಗಲೇ 20,000 ಕ್ಕಿಂತ ಹೆಚ್ಚು ಅರ್ಹ ಅಭ್ಯರ್ಥಿಗಳು ಯುಜಿಸಿ ನಿಯಮಾವಳಿ ಅನ್ವಯ ಅರ್ಹತೆ ಪಡೆದು ಸರ್ಕಾರಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಲು ತಯಾರಿದ್ದಾರೆ, ಆದ್ದರಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ ಎಲ್ಲಾ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
`ಪ್ರತಿ ವರ್ಷ ಅತಿಥಿ ಉಪನ್ಯಾಸಕರ ನೇಮಕಾತಿ ಸಂದರ್ಭದಲ್ಲಿ ಹಲವಾರು ಕಾರಣಗಳಿಗೆ ವಿಳಂಬ ಧೋರಣೆ ಅನುಸರಿಸುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಪದವಿ ಕಾಲೇಜುಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವುದನ್ನು ಕಾತರಿಪಡಿಸಿಕೊಳ್ಳುವ ದೃಷ್ಟಿಯಿಂದ ಯುಜಿಸಿ ನಿಯಮಾವಳಿ ಅನ್ವಯ ಅರ್ಹತೆಪಡೆದ ಅತಿಥಿ ಉಪನ್ಯಾಸಕರನ್ನು ನೇಮಿಸಿಕೊಳ್ಳಲು ಸರ್ಕಾರ ಆಸಕ್ತಿ ವಹಿಸಬೇಕು’ ಎಂದು ಒತ್ತಾಯಿಸಿದರು. ಸಮಸ್ಯೆ ಆಲಿಸಿದ ಶಾಸಕ ಭೀಮಣ್ಣ ನಾಯ್ಕ ಪರಿಹಾರ ಕಲ್ಪಿಸುವ ಆಶ್ವಾಸನೆ ನೀಡಿ, ಅಲ್ಲಿಂದ ತೆರಳಿದರು.