ಕಾರವಾರ – ಅಂಕೋಲಾ ರಾಷ್ಟ್ರೀಯ ಹೆದ್ದಾರಿಯಲ್ಲಿನ ಡಿವೈಡರಿಗೆ ರಿಕ್ಷಾ ಡಿಕ್ಕಿಯಾಗಿದೆ. ಪರಿಣಾಮ ರಿಕ್ಷಾ ಚಾಲಕ ರಮಾಕಾಂತ ನಾಯ್ಕ ಅವರು ಸಾವನಪ್ಪಿದ್ದಾರೆ.
ಅಂಕೋಲಾದ ಅವರ್ಸಾ ಬಳಿಯ ಹಟ್ಟಿಕೇರಿಯ ರಮಾಕಾಂತ ವಿಷ್ಣು ನಾಯ್ಕ (29) ಅವರು ರಿಕ್ಷಾ ಚಾಲಕರಾಗಿ ಬದುಕು ಕಟ್ಟಿಕೊಂಡಿದ್ದರು. ಕಾರವಾರದ ಮಾಲಾದೇವಿ ಮೈದಾನದ ಬಳಿ ಅವರು ವಾಸವಾಗಿದ್ದರು. ಅತಿ ವೇಗದ ವಾಹನ ಚಾಲನೆ ಅವರ ಬದುಕನ್ನು ಕಿತ್ತುಕೊಂಡಿತು. ರಿಕ್ಷಾ ಪಲ್ಟಿಯಾಗಿ ನೋವು ಅನುಭವಿಸಿದ್ದ ರಮಾಕಾಂತ ನಾಯ್ಕ ಅವರನ್ನು ಆಸ್ಪತ್ರೆಗೆ ದಾಖಲಿಸಿದರೂ ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಜನವರಿ 26ರಂದು ಮಧ್ಯಾಹ್ನ ರಮಾಕಾಂತ ನಾಯ್ಕ ಅವರು ಅಂಕೋಲಾದಿAದ ಕಾರವಾರದ ಕಡೆ ರಿಕ್ಷಾ ಓಡಿಸುತ್ತಿದ್ದರು. ಹಾರವಾಡ ಕ್ರಾಸಿನ ಬಳಿ ಅವರ ವಾಹನದ ವೇಗ ಹೆಚ್ಚಾಗಿದ್ದು, ಅಲ್ಲಿದ್ದ ಡಿವೈಡರಿಗೆ ರಿಕ್ಷಾ ಗುದ್ದಿತು. ಪರಿಣಾಮ ರಿಕ್ಷಾ ಪಲ್ಟಿಯಾಯಿತು. ಒಳಗಿದ್ದ ರಮಾಕಾಂತ ನಾಯ್ಕ ಅವರು ರಿಕ್ಷಾ ಜೊತೆ ರಭಸವಾಗಿ ನೆಲಕ್ಕೆ ಅಪ್ಪಳಿಸಿದರು.
ಈ ಅಪಘಾತದಿಂದ ರಮಾಕಾಂತ ನಾಯ್ಕ ಅವರ ತಲೆಗೆ ಭಾರೀ ಪ್ರಮಾಣದಲ್ಲಿ ಪೆಟ್ಟಾಯಿತು. ಕೈ, ಎದೆ, ಸೊಂಟಕ್ಕೂ ನೋವಾಯಿತು. ಅಲ್ಲಿದ್ದ ಜನ ಆಂಬುಲೆನ್ಸಿಗೆ ಫೋನ್ ಮಾಡಿದರು. ಗಾಯಗೊಂಡ ರಮಾಕಾಂತ ನಾಯ್ಕ ಅವರನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಅದಾದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಾರವಾರದ ಕಿಮ್ಸ್’ಗೆ ಕಳುಹಿಸಲಾಯಿತು.
ಕೊನೆಕ್ಷಣದವರೆಗೂ ರಮಾಕಾಂತ ನಾಯ್ಕ ಅವರನ್ನು ಉಳಿಸಿಕೊಳ್ಳಲು ನಿರಂತರ ಆರೈಕೆ ನಡೆಯಿತು. ಆದರೆ, ಆ ಚಿಕಿತ್ಸೆಗೆ ಅವರು ಸ್ಪಂದಿಸಲಿಲ್ಲ. ರಾತ್ರಿ 9.30ಕ್ಕೆ ರಮಾಕಾಂತ ನಾಯ್ಕ ಅವರು ಉಸಿರಾಟ ನಿಲ್ಲಿಸಿದರು. ಸಹೋದರನ ಸಾವಿನ ಬಗ್ಗೆ ಹಟ್ಟಿಕೇರಿಯ ಟೆಂಪೋ ಕ್ಲೀನರ್ ನಾಗರಾಜ ವಿಷ್ಣು ನಾಯ್ಕ ಅವರು ಪೊಲೀಸರಿಗೆ ಮಾಹಿತಿ ನೀಡಿದರು. ಅಪಘಾತದ ಬಗ್ಗೆ ಅಂಕೋಲಾ ಪೊಲೀಸರು ಪ್ರಕರಣ ದಾಖಲಿಸಿದರು.
`ಅತಿ ವೇಗ ಅಪಾಯಕ್ಕೆ ಕಾರಣ’