ದಾರಿ ಕೇಳುವ ನೆಪದಲ್ಲಿ ರಸ್ತೆಯಲ್ಲಿ ಹೋಗುವವರನ್ನು ನಿಲ್ಲಿಸಿ ಅವರ ಬಳಿಯಿದ್ದ ವಸ್ತುಗಳನ್ನು ದರೋಡೆ ಮಾಡುವ ತಂಡ ಎಲ್ಲಡೆ ತಿರುಗಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯ ಇಬ್ಬರು ಈ ತಂಡದವರ ಬಳಿ ಸಿಕ್ಕಿಬಿದ್ದಿದ್ದು, ಡಕಾಯಿತರ ಹೆಡೆಮುರಿ ಕಟ್ಟುವುದಕ್ಕಾಗಿ ಪೊಲೀಸರು ಕಾದು ಕುಳಿತಿದ್ದಾರೆ.
ಕೆಂಪು ಬಣ್ಣದ ಶಿಪ್ಟ್ ಕಾರಿನಲ್ಲಿ ಡಕಾಯಿತರು ತಿರುಗುತ್ತಿದ್ದಾರೆ. ನಿರ್ಜನ ಪ್ರದೇಶದಲ್ಲಿ ಸಂಚರಿಸುವವರನ್ನು ನಿಲ್ಲಿಸಿ ರಸ್ತೆ ಕೇಳುವ ನೆಪದಲ್ಲಿ ಅವರನ್ನು ದರೋಡೆ ಮಾಡುತ್ತಿದ್ದಾರೆ. ಕಾರಿನಲ್ಲಿ ಬರುವ ಡಕಾಯಿತರು ಕನ್ನಡದಲ್ಲಿಯೇ ಮಾತನಾಡುತ್ತಾರೆ. ಈಗಾಗಲೇ ಮೂರು ದರೋಡೆ ಪ್ರಕರಣಗಳು ನಡೆದಿದ್ದು, ಒಬ್ಬರ ಬಳಿಯಿದ್ದ 8 ಸಾವಿರ ರೂ ಹಣ ಡಕಾಯಿತರ ಪಾಲಾಗಿದೆ. ಮತ್ತೊಬ್ಬರ ಮೊಬೈಲ್ ಹಾಗೂ 5 ಸಾವಿರ ರೂ ದುಡ್ಡನ್ನು ಕಾರಿನಲ್ಲಿ ಬಂದವರು ದೋಚಿದ್ದಾರೆ.
ಮುಂಡಗೋಡು ಗಡಿಭಾಗದ ತಡಸ್ ಬಳಿ ಶಿರಸಿ ಹಾಗೂ ಮುಂಡಗೋಡಿನ ವ್ಯಕ್ತಿಯೊಬ್ಬರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದವರು ದರೋಡೆ ಮಾಡಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಡಕಾಯಿತರ ಸಂಚಾರ ಜೋರಾಗಿದ್ದು, ಮುಂಡಗೋಡು ಭಾಗದಲ್ಲಿ ಪೊಲೀಸರು ರಾತ್ರಿಯಿಡೀ ಗಸ್ತು ತಿರುಗುತ್ತಿದ್ದಾರೆ. ಹೀಗಾಗಿ ಸದ್ಯ ಆ ಭಾಗದಲ್ಲಿ ಡಕಾಯಿತರ ಸುಳಿವು ಇಲ್ಲ. ತಡಸ್ ಪೊಲೀಸರು ಪ್ರಕರಣ ದಾಖಲಿಸಿ ಡಕಾಯಿತರ ಶೋಧ ನಡೆಸುತ್ತಿದ್ದಾರೆ.
ಬೈಕು, ಕಾರಿನಲ್ಲಿ ಹೋಗುವವರನ್ನು ಈ ಡಕಾಯಿತರು ತಡೆದು ನಿಲ್ಲಿಸುತ್ತಿದ್ದಾರೆ. ವಿಳಾಸ ಕೇಳುವ ಅಥವಾ ಇನ್ಯಾವುದೇ ವಿಷಯವಾಗಿ ಮಾತನಾಡಿಸಿ ದಾಳಿ ಮಾಡುತ್ತಿದ್ದಾರೆ. ಮುಂಡಗೋಡು ವ್ಯಾಪ್ತಿಯಲ್ಲಿ ಕಟ್ಟೆಚ್ಚರವಹಿಸಲಾಗಿದೆ. ಉಳಿದ ಕಡೆಯೂ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ನಿಗಾವಹಿಸಲಾಗಿದೆ. ಅದಾಗಿಯೂ ಡಕಾಯಿತರು ಕಣ್ತಪ್ಪಿಸಿ ಬೇರೆ ಮಾರ್ಗಗಳಿಂದ ಜಿಲ್ಲೆ ಪ್ರವೇಶಿಸುವ ಸಾಧ್ಯತೆಗಳಿವೆ.
ಅನುಮಾನಾಸ್ಪದ ಕಾರು ಅಥವಾ ವ್ಯಕ್ತಿಗಳು ಕಾಣಿಸಿದರೆ ಕೂಡಲೇ ಇಲ್ಲಿ ಫೋನ್ ಮಾಡಿ
9480805258, 8105727893 ಅಥವಾ 9591512294