ಉತ್ತರ ಕನ್ನಡ ಜಿಲ್ಲೆಯ ಎರಡು ಕಡೆ ಬುಧವಾರ ಮಧ್ಯಾಹ್ನ ಬಸ್ ಅಪಘಾತ ನಡೆದಿದೆ. ಚಾಲಕರ ಸಮಯ ಪ್ರಜ್ಞೆಯಿಂದಾಗಿ ಎರಡೂ ಕಡೆ ದೊಡ್ಡ ಅವಘಡ ನಡೆದಿಲ್ಲ.
ಶಿರಸಿಯ ಬನವಾಸಿ ಚಂದ್ರಗುತ್ತಿ ಮಾರ್ಗದ ಬಾಶಿ ಬಳಿ ಬಸ್ಸು ರಸ್ತೆ ಅಂಚಿಗೆ ಸರಿದಿದೆ. ದೊಡ್ಡ ಪ್ರಮಾಣದಲ್ಲಿ ಗಿಡ-ಗಂಟಿಗಳು ಬೆಳೆದಿದ್ದರಿಂದ ಬಸ್ಸು ಅದಕ್ಕೆ ಡಿಕ್ಕಿಯಾಗಿ ಅಲ್ಲಿಯೇ ನಿಂತಿದೆ. ಮುಂಡಗೋಡಿನ ಸನವಳ್ಳಿ ಬಳಿ ಸಹ ಬಸ್ಸಿನ ಸ್ಟೇರಿಂಗ್ ತುಂಡಾಗಿ ಬಸ್ಸು ರಸ್ತೆ ಬದಿಗೆ ವಾಲಿದೆ. ಕೊಂಚ ಆಯತಪ್ಪಿದರೂ ಬಸ್ಸಿನಲ್ಲಿದ್ದವರೆಲ್ಲರೂ ಪೆಟ್ಟು ಮಾಡಿಕೊಳ್ಳುವ ಅಪಾಯವಿದ್ದು, ಈ ಎರಡು ಕಡೆ ಚಾಲಕರ ಚಾಣಾಕ್ಷತನದಿಂದ ಪ್ರಯಾಣಿಕರು ಜೀವಾಪಾಯದಿಂದ ಪಾರಾಗಿದ್ದಾರೆ.
ಬನವಾಸಿಯಿಂದ ಚಂದ್ರಗುತ್ತಿಗೆ ಸಾಗುವ ರಸ್ತೆ ಬದಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಜಗ್ಗೆ ಬೆಳೆದಿದೆ. ಇದರಿಂದ ಆ ಮಾರ್ಗದಲ್ಲಿ ಎದುರಿನಿಂದ ಬರುವ ವಾಹನಗಳು ಚಾಲಕರಿಗೆ ಕಾಣುತ್ತಿಲ್ಲ. ಎದುರಿನಿಂದ ಏಕಾಏಕಿ ವಾಹನ ಬಂದ ಕಾರಣ ಬಾಶಿ ಬಳಿ ಸಂಚರಿಸುತ್ತಿದ್ದ ಬಸ್ಸಿನ ಚಾಲಕ ಬಸ್ಸನ್ನು ಎಡಕ್ಕೆ ತಿರುಗಿಸಿದ್ದು, ಈ ವೇಳೆ ಬಸ್ಸು ನಿಯಂತ್ರಣ ತಪ್ಪಿತು. ಬಸ್ಸು ಕಂದಕಕ್ಕೆ ಬೀಳುವ ಅಪಾಯ ಅರಿತ ಚಾಲಕ ತಕ್ಷಣ ಬಸ್ಸನ್ನು ನಿಯಂತ್ರಿಸಿ ಜನರ ಜೀವ ಉಳಿಸಿದರು.
ಬಂಕಾಪುರದಿoದ ಮುಂಡಗೋಡಿಗೆ ಬರುತ್ತಿದ್ದ ಬಸ್ಸು ಸನವಳ್ಳಿಯಲ್ಲಿ ಸ್ಟೇರಿಂಗ್ ತುಂಡಾಯಿತು. ಆ ಸ್ಟೇರಿಂಗ್ ಚಾಲಕರ ಕೈಗೆ ಬಂದಿತು. ಈ ವೇಳೆ ಬಸ್ಸು ವಾಲಿದ್ದು, ಕಂದಕದ ಕಡೆ ತಿರುಗಿತು. ತಕ್ಷಣ ಚಾಲಕ ಬ್ರೆಕ್ ಅದುಮಿ ಬಸ್ಸನ್ನು ತಮ್ಮ ನಿಯಂತ್ರಣಕ್ಕೆ ತಂದರು. ಆ ಮೂಲಕ ಬಸ್ಸಿನ ಒಳಗಿದದ 40 ಜನರ ಜೀವ ಕಾಪಾಡಿದರು. ಡಕೋಟಾ ಎಕ್ಸಪ್ರೆಸ್ ಬಸ್ಸು ಓಡಿಸಿದ ಕಾರಣ ಈ ಅವಾಂತರ ನಡೆದ ಬಗ್ಗೆ ಪ್ರಯಾಣಿಕರು ದೂರಿದರು.
`ಶಿರಸಿಯ ಬಾಶಿಯಲ್ಲಿ ರಸ್ತೆ ಪಕ್ಕ ಗಿಡ-ಗಂಟಿಗಳನ್ನು ಕಟಾವು ಮಾಡದ ಕಾರಣ ನಿತ್ಯವೂ ಈ ಭಾಗದಲ್ಲಿ ಅವಘಡ ನಡೆಯುತ್ತಿದೆ. ಶಾಲಾ ಮಕ್ಕಳು ಹೆಚ್ಚಿಗೆ ಓಡಾಟ ನಡೆಸುವ ಈ ರಸ್ತೆಯಲ್ಲಿ ಅಪಾಯ ಆಗುವ ಮೊದಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಭಾಶಿ ಗ್ರಾಮ ಪಂಚಾಯತ ಸದ್ಯಸ ಗಜಾನನ ಎಂ ಗೌಡ ಅವರು ಆಕ್ರೋಶದಿಂದ ಮಾತನಾಡಿದರು. ತುರ್ತು ಕ್ರಮ ಆಗದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿಯೂ ಎಚ್ಚರಿಸಿದರು.