ಕಾರವಾರದ ಸಿವಿಲ್ ಗುತ್ತಿಗೆದಾರ ಪ್ರೀತಂ ಮಾಸೂರಕರ್ ಅವರಿಗೆ ಅವರ ಸೋದರಳಿಯ ಚಿರಾಗ ಮಾಸೂರಕರ್ ಅವರೇ ಮೋಸ ಮಾಡಿದ್ದಾರೆ. ಚಿರಾಗ ಮಾಸೂರಕರ್ ಅವರ ಜೊತೆ ಅಬ್ಬಾಸ್ ಬೇರಿ ಹಾಗೂ ಸಾಹಿಲ್ ಬೇರಿ ಸಹ ಅನ್ಯಾಯದ ಹಣದಲ್ಲಿ ಪಾಲುಪಡೆದಿದ್ದಾರೆ.
ಕಾರವಾರದ ಕೈಕಿಣಿ ರಸ್ತೆಯ ರಾಯ್ಕರ್ ಮೆನರ್ ಬಳಿ ಪ್ರೀತಂ ಮಾಸೂರಕರ್ ಅವರು ವಾಸವಾಗಿದ್ದಾರೆ. ಅವರು ತಮಗೆ ಪೂರ್ವಜರಿಂದ ಬಂದ ಬೈತಖೋಲದ ಭೂಮಿಯಲ್ಲಿ ಶೆಡ್ ನಿರ್ಮಿಸಿದ್ದು, ಅದರಲ್ಲಿ ವಿವಿಧ ಸಾಮಗ್ರಿಗಳನ್ನು ದಾಸ್ತಾನು ಮಾಡಿದ್ದರು. ಅಲ್ಲಿ ವಿವಿಧ ಕಟ್ಟಡ ನಿರ್ಮಾಣ ಸಾಮಗ್ರಿ, ಬಗೆ ಬಗೆಯ ಯಂತ್ರೋಪಕರಣ, ವಿದ್ಯುತ್ ಫಿಟಿಂಗ್ ಸಾಮಗ್ರಿ, ಪೈಪು ಹಾಗೂ ಹಾರ್ಡವೇರ್ ಸಾಮಗ್ರಿಗಳನ್ನು ಅವರು ಇರಿಸಿದ್ದರು.
ಪ್ರೀತಂ ಮಾಸೂರಕರ್ ಅವರ ಸೋದರಳಿಯರಾಗಿರುವ ಬೈತಖೋಲದ ಚಿರಾಗ ಮಾಸೂರಕರ್ ಅವರು ಆ ಕಟ್ಟಡದ ಉಸ್ತುವಾರಿ ನೋಡಿಕೊಳ್ಳುತ್ತಿದ್ದರು. ಹೀಗಿರುವಾಗ ಚಿರಾಗ ಮಾಸೂರಕರ್ ಅವರಿಗೆ ಹಣಕಾಸಿನ ಅಗತ್ಯ ಎದುರಾಗಿದ್ದು, ಪ್ರೀತಂ ಮಾಸೂರಕರ್ ಅವರ ಕಟ್ಟಡದಲ್ಲಿದ್ದ 19 ಲಕ್ಷ ರೂ ಮೌಲ್ಯದ ಸಾಮಗ್ರಿಗಳನ್ನು ಮಾರಾಟ ಮಾಡುವ ವಿಚಾರಕ್ಕೆ ಬಿದ್ದರು. 19 ಲಕ್ಷ ರೂ ಮೌಲ್ಯದ ಸಾಮಗ್ರಿಗಳನ್ನು ಅವರು ಬರೇ 70 ಸಾವಿರ ರೂಪಾಯಿಗೆ ಮಾರಾಟ ಮಾಡಿದರು.
ಕಡಿಮೆ ಬೆಲೆಗೆ ಬಹಳ ವಸ್ತು ಸಿಗುವುದಾಗಿ ಅರಿತ ಕಾರವಾರ ಕೆಇಬಿ ರಸ್ತೆಯ ಅಬ್ಬಾಸ್ ಬೇರಿ ಹಾಗೂ ಸಾಹಿಲ್ ಬೇರಿ ಸೇರಿ ಅಲ್ಲಿದ್ದ ಎಲ್ಲಾ ಸಾಮಗ್ರಿಗಳನ್ನು ಖರೀದಿಸಿದರು. ಸೆಪ್ಟೆಂಬರ್ 21ರಂದು ಪ್ರೀತಂ ಮಾಸೂರಕರ್ ಅವರು ತಮ್ಮ ತಂದೆಯ ಶ್ರಾದ್ಧ ಮಾಡಲು ಆ ಕಟ್ಟಡದ ಬಳಿ ಹೋದರು. ಆಗ, ಅಲ್ಲಿ ತಾವಿರಿಸಿದ್ದ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಕಾಣಲಿಲ್ಲ. ಚಿರಾಗ ಮಾಸೂರಕರ್ ಅವರನ್ನು ಕರೆದು ವಿಚಾರಿಸಿದಾಗ ಅಬ್ಬಾಸ್ ಬೇರಿ ಹಾಗೂ ಸಾಹಿಲ್ ಬೇರಿ ಅವರಿಗೆ ಎಲ್ಲಾ ವಸ್ತು ಮಾರಾಟ ಮಾಡಿದನ್ನು ಒಪ್ಪಿಕೊಂಡರು.
ತಮಗೆ ಮಾಹಿತಿ ನೀಡದೇ ಎಲ್ಲಾ ವಸ್ತು ಮಾರಾಟ ಮಾಡಿದ ಚಿರಾಗ ಮಾಸೂರಕರ್ ಹಾಗೂ ಅದನ್ನು ಖರೀದಿಸಿದ ಅಬ್ಬಾಸ್ ಬೇರಿ ಹಾಗೂ ಸಾಹಿಲ್ ಬೇರಿ ವಿರುದ್ಧ ಪ್ರೀತಂ ಮಾಸೂರಕರ್ ಅವರು ಪೊಲೀಸ್ ದೂರು ನೀಡಿದರು. ಕಾರವಾರ ಶಹರ ಪೊಲೀಸ್ ಠಾಣೆಯವರು ಪ್ರಕರಣ ದಾಖಲಿಸಿದರು.