ಶಿವಮೊಗ್ಗದ ಬಾಲ ನಟಿ ಋತು ಸ್ಪರ್ಶ ಅವರಿಗೆ ಬೆಂಗಳೂರು ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಬಾಲ ಕಲಾವಿದೆ ಎಂಬ ಪುರಸ್ಕಾರ ಸಿಕ್ಕಿದೆ. ಮಕ್ಕಳ ಚಲನಚಿತ್ರೋತ್ಸವದ ಎರಡನೇ ಆವೃತ್ತಿಯಲ್ಲಿ ಅವರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಋತು ಸ್ಪರ್ಶ ಅವರು ಟೆಕ್ವಾಂಡೋ ಗರ್ಲ್ ಚಿತ್ರದಲ್ಲಿ ನಟಿಸಿದ್ದರು. ಅವರ ನಟನೆಗೆ ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ವೇದಿಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅನೇಕರು ಬಾಲ ಕಲಾವಿದೆಯ ಅಭಿನಯನವನ್ನು ಕೊಂಡಾಡಿದರು. ಉಲ್ಲಾಸ್ ಸ್ಕೂಲ್ ಆಫ್ ಸಿನಿಮಾಸ್ ಅವರು ಈ ಕಾರ್ಯಕ್ರಮ ಆಯೋಜಿಸಿದ್ದು, ಅಚ್ಚುಕಟ್ಟಾದ ಕಾರ್ಯಕ್ರಮ ಗಮನಸೆಳೆಯಿತು. ದಕ್ಷಿಣ ಕೊರಿಯಾದ ಸಮರ ಕಲೆಯಾದ ಟೆಕ್ವಾಂಡೋ ಅಭ್ಯಾಸ ಮಾಡಿರುವ ಅವರು ಈಜು, ಗಾಯನ ಹಾಗೂ ನಟನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ತಮ್ಮ ಮೂರನೇ ವಯಸ್ಸಿನಲ್ಲಿ ಟೆಕ್ವಾಂಡೋ ಅಭ್ಯಾಸ ಮಾಡಿದ ಅವರು ಹಲವು ಟೂರ್ನಮೆಂಟ್’ಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಪ್ರವೀಣ್ ಭಾನು ಮತ್ತು ಡಾ ಸುನಿತಾ ಪ್ರವೀಣ್ ಅವರ ಏಕೈಕ ಪುತ್ರಿಯಾಗಿರುವ ಋತು ಸ್ಪರ್ಶ ಅವರು ಬಾಲ್ಯದಿಂದಲೇ ಅಭಿನಯನದ ಕಡೆ ಆಸಕ್ತಿವಹಿಸಿದ್ದಾರೆ. 12 ವರ್ಷದ ಅವರು ಸದ್ಯ ರಾಜಾಜಿನಗರದ ಶ್ರೀ ಸಾಯಿ ವಿದ್ಯಾಲಯದಲ್ಲಿ ಏಳನೇ ತರಗತಿಯಲ್ಲಿ ಓದುತ್ತಿದ್ದಾರೆ. 2024ರಲ್ಲಿ ಬಿಡುಗಡೆಯಾದ ಟೆಕ್ವಾಂಡೋ ಗರ್ಲ್ ಚಿತ್ರಕಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿಯೆಟ್ನಾಂ ಅಂತರಾಷ್ಟ್ರೀಯ ಚಲನಚಿತ್ರದಲ್ಲಿ ಅತ್ಯುತ್ತಮ ಬಾಲ ನಟಿ, ಕರ್ನಾಟಕ ರಾಜ್ಯದ ಚಂದನವನ ಫಿಲಂ ಕ್ರಿಟಿಕ್ ಪ್ರಶಸ್ತಿ, ಏಶಿಯನ್ ನೆಟ್ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಚಿತ್ರಸಂತೆ ಪ್ರಶಸ್ತಿಯನ್ನು ಅವರು ಪಡೆದಿದ್ದಾರೆ.