ಗೋಕರ್ಣದ ಓಂ ಕಡಲತೀರದಲ್ಲಿರುವ ಕಲ್ಪಂಡೆಗಳ ಮೇಲೆ ನಿಂತು ಸೆಲ್ಪಿ ತೆಗೆದುಕೊಳ್ಳುತ್ತಿದ್ದ ಪ್ರವಾಸಿಗರೊಬ್ಬರು ಅರಬ್ಬಿ ಅಲೆಗಳಿಗೆ ಕೊಚ್ಚಿ ಹೋಗಿದ್ದಾರೆ. ಸೆಲ್ಪಿ ಹುಚ್ಚಿಗೆ 45 ವರ್ಷದ ವ್ಯಕ್ತಿ ಸಾವನಪ್ಪಿದ್ದಾರೆ.
ಶಿವಮೊಗ್ಗದಿಂದ ಒಟ್ಟು 10 ಜನ ಶುಕ್ರವಾರ ಗೋಕರ್ಣಕ್ಕೆ ಬಂದಿದ್ದರು. ತಮ್ಮ ಬಳಗದವರ ಜೊತೆ ಅವರೆಲ್ಲರೂ ಸಮುದ್ರ ಸ್ನಾನ ಮಾಡುತ್ತಿದ್ದರು. ಈ ವೇಳೆ ಆ ಗುಂಪಿನಲ್ಲಿದ್ದ ಅಸ್ಲಾಂ ಎಂಬಾತರಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವ ಮನಸ್ಸಾಯಿತು. ಹೀಗಾಗಿ ಕೈಯಲ್ಲಿ ಮೊಬೈಲ್ ಹಿಡಿದು ಜಾರುತ್ತಿರುವ ಕಲ್ಬಂಡೆಗಳ ಮೇಲೆ ಹತ್ತಿದರು. ಒಂದೆರಡು ಸೆಲ್ಪಿಯನ್ನು ಕ್ಲಿಕ್ಕಿಸಿದರು. ಆ ವೇಳೆಗೆ ಬಂದ ದೊಡ್ಡ ಅಲೆಯೊಂದು ಅವರಿಗೆ ಬಡಿದಿದ್ದು, ಮೊಬೈಲ್ ಜೊತೆ ಅವರು ನೀರಿಗೆ ಬಿದ್ದರು.
ಅಸ್ಲಾಂ ಅವರಿಗೆ ಈಜು ಸರಿಯಾಗಿ ಬರುತ್ತಿರಲಿಲ್ಲ. ಹೀಗಾಗಿ ಅಲೆಗಳ ಅಬ್ಬರದಲ್ಲಿ ಅವರು ಕೊಚ್ಚಿ ಹೋಗಿದ್ದು, ಈಜಿ ದಡ ಸೇರುವ ಪ್ರಯತ್ನವೂ ಫಲ ಕೊಡಲಿಲ್ಲ. ನೀರಿಗೆ ಬಿದ್ದ ತಕ್ಷಣ ಅವರು ಒಮ್ಮೆಲೆ ಉಸಿರು ಒಳ ತೆಗೆದುಕೊಂಡಿದ್ದು, ಗಾಳಿ ಜೊತೆ ನೀರು ಮೂಗಿನೊಳಗೆ ಹೋಯಿತು. ಪರಿಣಾಮ ಅಸ್ಲಾಂ ಅವರು ಸಮುದ್ರದ ನೀರಿನಲ್ಲಿಯೇ ತಮ್ಮ ಪ್ರಾಣ ಬಿಟ್ಟರು. ಅಸ್ಲಾಂ ಅವರು ನೀರಿಗೆ ಬಿದ್ದಿರುವುದನ್ನು ನೋಡಿದ ಉಳಿದವರು ಅಲ್ಲಿದ್ದ ರಕ್ಷಣಾ ಸಿಬ್ಬಂದಿಗೆ ಮಾಹಿತಿ ನೀಡಿದರು. ರಕ್ಷಣಾ ಸಿಬ್ಬಂದಿ ಅಸ್ಲಾಂ ಅವರ ರಕ್ಷಣೆಗೆ ನೀರಿಗೆ ಹಾರಿದರು. ಅವರನ್ನು ದಡಕ್ಕೆ ಎಳೆದು ತಂದು ನೋಡಿದಾಗ ಸಾವನಪ್ಪಿರುವುದು ಅರಿವಿಗೆ ಬಂದಿತು.
ಅಸ್ಲಾo ಅವರ ಶವವನ್ನು ಸದ್ಯ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸಮುದ್ರದ ಬಂಡೆ ಮೇಲೆ ನಿಲ್ಲದಂತೆ ನಾಮಫಲಕ ಅಳವಡಿಸಿದರೂ ಜನ ಸೆಲ್ಪಿ ಹುಚ್ಚಿಗೆ ಅಪಾಯಕಾರಿ ಸನ್ನಿವೇಶ ಎದುರಿಸುತ್ತಿದ್ದು, ಇದರಿಂದ ಸಾವು-ನೋವಿನ ಪ್ರಮಾಣ ಹೆಚ್ಚಾಗಿದೆ. ರಕ್ಷಣಾ ಸಿಬ್ಬಂದಿ ಜನರ ಹುಚ್ಚಾಟ ತಡೆಗೆ ಹರಸಾಹಸ ನಡೆಸುತ್ತಿದ್ದು, ಅದಾಗಿಯೂ ಇಲ್ಲಿ ಪ್ರವಾಸಿಗರು ಕೇಳುತ್ತಿಲ್ಲ.