ಶಾಲೆಗೆ ತೆರಳಲು ಯೋಗ್ಯ ಬಟ್ಟೆ ಇಲ್ಲದೇ ಹಾಸ್ಟೇಲ್ ವಿದ್ಯಾರ್ಥಿನಿಯರು ಅನುಭವಿಸುತ್ತಿರುವ ಸಮಸ್ಯೆ ಅರಿತ ರುಕ್ಮಿಣಿ ಜ್ಯುವಲರ್ಸ ಮಾಲಕ ನಾಗೇಂದ್ರ ವೇರ್ಣೇಕರ ಅವರು ತಮ್ಮ ಉದ್ದಿಮೆಯ ಲಾಭದ ಹಣದಲ್ಲಿ ಮಕ್ಕಳಿಗೆ ಬಟ್ಟೆ ಕೊಡಿಸಿದ್ದಾರೆ.
ಕಾರವಾರದ ಹೊಸಳ್ಳಿಯಲ್ಲಿ ನಾಗೇಂದ್ರ ವೇರ್ಣೇಕರ ಕುಟುಂಬದವರು ನಾಲ್ಕು ದಶಕಗಳಿಂದ ಚಿನ್ನದ ಆಭರಣಗಳ ತಯಾರಿಕೆ ಮಾಡುತ್ತಿದ್ದಾರೆ. ಆರು ವರ್ಷಗಳ ಹಿಂದೆ ನಾಗೇಂದ್ರ ವೇರ್ಣೇಕರ್ ಅವರು ಸದಾಶಿವಗಡದಲ್ಲಿ ರುಕ್ಮಿಣಿ ಜ್ಯುವಲರ್ಸ ಎಂಬ ಮಳಿಗೆ ಸ್ಥಾಪಿಸಿದ್ದು, ತಮ್ಮ ಉದ್ದಿಮೆಯಿಂದ ಬರುವ ಲಾಭದ ಒಂದು ಭಾಗವನ್ನು ಅವರು ಸಮಾಜ ಸೇವೆಗೆ ಮೀಸಲಿರಿಸಿದ್ದಾರೆ. ನೊಂದವರಿಗೆ ನೆರವು ನೀಡುವುದರಲ್ಲಿ ಅವರು ಮುಂಚೂಣಿಯಲ್ಲಿದ್ದಾರೆ.
ಕಾರವಾರದ ಅಸ್ನೋಟಿಯ ಪ್ರೇಮ ಆಶ್ರಮ ಚ್ಯಾರಿಟಬಲ್ ಟ್ರಸ್ಟ್ ನಡೆಸುವ ಬಾಲಕಿಯರ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಸಮವಸ್ತ್ರ ಅಗತ್ಯವಿರುವ ಬಗ್ಗೆ ಅರಿತ ನಾಗೇಂದ್ರ ವೇರ್ಣೇಕರ್ ಅವರು ಅಲ್ಲಿನ ಎಲ್ಲಾ ಮಕ್ಕಳಿಗೆ ಬಟ್ಟೆ ಕೊಡಿಸಿದ್ದಾರೆ. ಇದರಿಂದ ಖುಷಿಯಾದ ಮಕ್ಕಳು ನಾಗೇಂದ್ರ ವೇರ್ಣೇಕರ್ ಹಾಗೂ ಅವರ ಪತ್ನಿ ನೀಲಾ ವೇರ್ಣೇಕರ್ ದಂಪತಿಯನ್ನು ಸನ್ಮಾನಿಸಿದ್ದಾರೆ. ಈ ವೇಳೆ ಮಾತನಾಡಿದ ನಾಗೇಂದ್ರ ವೇರ್ಣೇಕರ್ ಅವರು `ವಿದ್ಯಾರ್ಥಿ ಜೀವನ ಪ್ರತಿಯೊಬ್ಬರ ಪಾಲಿನ ಅಮೃತಘಳಿಗೆ. ಉತ್ತಮ ಭವಿಷ್ಯಕ್ಕಾಗಿ ಸಾಧನೆ ಮಾಡಿ’ ಎಂದು ಕರೆ ನೀಡಿದರು.
ಶಿವಾಜಿ ಮಂದಿರದ ಮುಖ್ಯಾಧ್ಯಾಪಕ ಗಣೇಶ ಬೀಷ್ಟಣ್ಣನವರ್ ನಾಗೇಂದ್ರ ವೇರ್ಣೇಕರ ಅವರ ಸಹಕಾರ ಸ್ಮರಿಸಿದರು. ಹಿರಿಯ ಶಿಕ್ಷಕ ಸಂತೋಷ ಕಾಂಬಳೆ, ಜೆ ಬಿ ತಿಪ್ಪೇಸ್ವಾಮಿ ಅವರು ಕಾರ್ಯಕ್ರಮದಲ್ಲಿದ್ದರು.
Discussion about this post