ಮಳೆಗಾಲದ ಅವಧಿಯಲ್ಲಿ ಹೊನ್ನಾವರದ ಕೋಡಾಣಿ ಗ್ರಾಮ ಪಂಚಾಯತ ಕಚೇರಿಯನ್ನು ತಾತ್ಕಾಲಿಕವಾಗಿ ಬೇರೆ ಕಡೆ ಸ್ಥಳಾಂತರ ಮಾಡಲಾಗಿದ್ದು, ನೀಡಿದ ಭರವಸೆಯಂತೆ ಈವರೆಗೂ ಗ್ರಾ ಪಂ ಕಚೇರಿ ಮೂಲ ಕಟ್ಟಡಕ್ಕೆ ಮರಳಿಲ್ಲ. ಈ ಹಿನ್ನಲೆ ಆ ಭಾಗದ ಜನ ಶುಕ್ರವಾರ ಪ್ರತಿಭಟನೆ ನಡೆಸಿದ್ದಾರೆ.
ಕೊಡಾಣಿ ಗ್ರಾಪಂ ಕಾರ್ಯಾಲಯವನ್ನು ಸೆಪ್ಟೆಂಬರ್ 30ರ ಒಳಗೆ ಮೂಲ ಕಟ್ಟಡಕ್ಕೆ ಸ್ಥಳಾಂತರಿಸುವ ಬಗ್ಗೆ ಭರವಸೆ ನೀಡಲಾಗಿತ್ತು. ಜೂನ್ 18ರಂದು ನಡೆದ ಸಭೆಯಲ್ಲಿ ಹೊಸ ಕಚೇರಿ ತಾತ್ಕಾಲಿಕ ಎಂದು ಅಧಿಕಾರಿಗಳು ಹೇಳಿದ್ದು, ಅವರು ನುಡಿದಂತೆ ನಡೆಯಲಿಲ್ಲ. ಸೆಪ್ಟೆಂಬರ್ 30ರ ಅವಧಿ ಮುಗಿದರೂ ಕಚೇರಿ ಮೊದಲಿದ್ದ ಸ್ಥಳಕ್ಕೆ ಬಂದಿಲ್ಲ.
ಈ ಹಿನ್ನಲೆ ಗ್ರಾಮದ ಜನ ಆಕ್ರೋಶವ್ಯಕ್ತಪಡಿಸಿದರು. ಪ್ರತಿಭಟನೆ ವೇಳೆ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮತ್ತು ಗ್ರಾಪಂ ಪಿಡಿಓ ಕಚೇರಿ ಬಳಿ ಇಲ್ಲದ ಕಾರಣ ಘೋಷಣೆ ಕೂಗಿದರು. ಪಿಡಿಒ ಉದ್ದೇಶ ಪೂರ್ವಕವಾಗಿ ರಜೆ ಹಾಕಿದ್ದಾರೆ ಎಂದು ದೂರಿದರು. ಕೂಡಲೇ ಮೂಲ ಸ್ಥಳಕ್ಕೆ ಕಚೇರಿ ಸ್ಥಳಾಂತರ ಮಾಡದಿದ್ದರೆ ಗ್ರಾಮ ಪಂಚಾಯತ್ ಕಚೇರಿಯಲ್ಲಿಯೇ ಪ್ರತಿಭಟನೆ ಮುಂದುವರಿಸುವುದಾಗಿ ಗ್ರಾಪಂ ಸದಸ್ಯ ಜಯಂತ ನಾಯ್ಕ ಅವರು ಎಚ್ಚರಿಸಿದರು.
ಸ್ಥಳಕ್ಕೆ ಆಗಮಿಸಿದ ತಾಪಂ ಆಡಳಿತಾಧಿಕಾರಿ ಎನ್ ಆರ್. ಹೆಗಡೆ ಅವರು, `ಮೂಲ ಕಟ್ಟಡದ ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪತ್ರ ಬರೆಯಲಾಗುತ್ತದೆ. ಸೋಮವಾರದೊಳಗೆ ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂಬ ಭರವಸೆ ನೀಡಿದರು. ಹೀಗಾಗಿ ಪ್ರತಿಭಟನಾಕಾರರು ಸುಮ್ಮನಾದರು.