ಮುಂಡಗೋಡಿನ ಅಜಯ ಕರಿಹೊಲದವರ್ ಅವರು ಸ್ನೇಹಿತರ ಜೊತೆ ಸನವಳ್ಳಿ ಜಲಾಶಯಕ್ಕೆ ಈಜಲು ಹೋಗಿದ್ದು, ಜಲ ಸಮಾಧಿಯಾಗಿದ್ದಾರೆ. ಅಜಯ ಕರಿಹೊಲದವರ್ ಅವರು ಮುಳುಗುವುದನ್ನು ನೋಡಿದರೂ ಸ್ನೇಹಿತರು ತಕ್ಷಣ ವಿಷಯ ಬಾಯ್ಬಿಡದ ಕಾರಣ ಅಪಾಯದಲ್ಲಿದ್ದ ಬಾಲಕನನ್ನು ಉಳಿಸಿಕೊಳ್ಳಲು ಆಗಲಿಲ್ಲ.
ಭಾನುವಾರ ಶಾಲೆಗೆ ರಜೆಯಿದ್ದ ಕಾರಣ ಅಜಯ ಕರಿಹೊಲದವರ್ (17) ಅವರು ಸ್ನೇಹಿತರ ಜೊತೆ ಆಟಕ್ಕೆ ಹೋಗಿದ್ದರು. ಅಲ್ಲಿಂದ ಮುಂದೆ ಸ್ನೇಹಿತರೆಲ್ಲರೂ ಸೇರಿ ಸನವಳ್ಳಿ ಜಲಾಶಯಕ್ಕೆ ಹೋಗಿದ್ದು, ಈಜಲು ನಿರ್ಧರಿಸಿದರು. ನೀರಿನ ಆಳಕ್ಕೆ ಹೋಗಿದ್ದ ಅಜಯ ಕರಿಹೊಲದವರ್ ಅಲ್ಲಿಯೇ ಮುಳುಗಡೆಯಾದರು. ಸ್ನೇಹಿತ ನೀರಿನಲ್ಲಿ ಮುಳುಗುತ್ತಿರುವುದನ್ನು ಜೊತೆಗಿದ್ದವರು ಗಮನಿಸಿದರು. ಆದರೆ, ಅವರಿಂದ ಅಜಯ ಕರಿಹೊಲದವರ್ ಅವರ ರಕ್ಷಣೆ ಸಾಧ್ಯವಾಗಲಿಲ್ಲ.
`ಅಜಯ ಕರಿಹೊಲದವರ್ ಅವರು ನೀರುಪಾಲಾದ ವಿಷಯ ಹೇಳಿದರೆ ತಮ್ಮ ಮೇಲೆ ಆರೋಪ ಬರುತ್ತದೆ’ ಎಂಬ ಕಾರಣಕ್ಕೆ ಸ್ನೇಹಿತರೆಲ್ಲರೂ ಸುಮ್ಮನೆ ಮನೆಗೆ ಮರಳಿದ್ದರು. ರಾತ್ರಿಯಾದರೂ ಅಜಯ ಕರಿಹೊಲದವರ್ ಮರಳದ ಕಾರಣ ಪಾಲಕರು ಸ್ನೇಹಿತರನ್ನು ಪ್ರಶ್ನಿಸಿದ್ದು, ಆ ವೇಳೆ ಅಜಯ ಕರಿಹೊಲದವರ್ ಅವರು ನೀರಿನಲ್ಲಿ ಮುಳುಗಿದ ವಿಷಯ ಹೊರಬಿದ್ದಿತು.
ಆತಂಕಗೊAಡ ಕುಟುಂಬಸ್ಥರು ಮುಂಡಗೋಡು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ರಾತ್ರಿಯಿಡೀ ಶೋಧ ನಡೆಸಿದರು. ಆದರೆ, ರಾತ್ರಿ ಕತ್ತಲಿನಲ್ಲಿ ಏನೂ ಕಾಣಲಿಲ್ಲ. ಸೋಮವಾರ ಬೆಳಗ್ಗೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ನಡೆಸಿದ್ದು, ಆಗ ಶವ ಸಿಕ್ಕಿತು.