ಖ್ಯಾತ ಯಕ್ಷಗಾನ ತಾರೆ ಅಶ್ವಿನಿ ಕೊಂಡದಕುಳಿ ಅವರು ಇದೀಗ ವಿವಾದದ ಕೇಂದ್ರವಾಗಿದ್ದಾರೆ. ತಮ್ಮ ತಂದೆಯ ನಡೆಯನ್ನು ಸಮರ್ಥಿಸಿಕೊಳ್ಳುವ ಬರದಲ್ಲಿ ಅಶ್ವಿನಿ ಕೊಂಡದಕುಳಿ ಅವರು ಬೇರೆ ಕಲಾವಿದರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಅದರಲ್ಲಿಯೂ `ಯಕ್ಷಗಾನ ಚೌಕಿಯಲ್ಲಿ ಹೆಣ್ಣು ಮಕ್ಕಳನ್ನು ಕೆಟ್ಟದಾಗಿ ನೋಡುತ್ತಾರೆ’ ಎಂಬರ್ಥದಲ್ಲಿ ಅಶ್ವಿನಿ ಅವರು ಮಾತನಾಡಿದ್ದು, ಈ ಮಾತನ್ನು ಇನ್ನಿತರ ಪ್ರಸಿದ್ಧ ಕಲಾವಿದರು ಸಹಿಸಿಕೊಂಡಿಲ್ಲ.
ಅಶ್ವಿನಿ ಕೊಂಡದಕುಳಿ ಅವರು ಪ್ರಸಿದ್ಧ ಯಕ್ಷ ನಟ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರ ಪುತ್ರಿ. ಬಾಲ್ಯದಿಂದಲೂ ಯಕ್ಷಗಾನದ ಬಗ್ಗೆ ಅಪಾರ ಆಸಕ್ತಿಹೊಂದಿರುವ ಅಶ್ವಿನಿ ಅವರಿಗೆ ಈ ಕಲೆ ರಕ್ತಗತವಾಗಿ ಬಂದಿದೆ. ಹುಟ್ಟಿನಿಂದಲೇ ತಂದೆಯ ಪಾತ್ರ ನೋಡಿ ಬೆಳೆದ ಅವರು ಸಹಜವಾಗಿ ಯಕ್ಷಗಾನವನ್ನು ರೂಢಿಸಿಕೊಂಡರು. ಪುರುಷರೇ ಪ್ರಧಾನವಾಗಿದ್ದ ಯಕ್ಷಗಾನ ವೇದಿಕೆಯಲ್ಲಿ ತಮ್ಮ ಹೆಜ್ಜೆ ಮೂಡಿಸಿದರು. ತಮ್ಮ ಜೀವನ ಸಂಗಾತಿಯ ಆಯ್ಕೆಯಲ್ಲಿಯೂ ಅವರು ಕಲಾವಿದರಿಗೆ ಆದ್ಯತೆ ನೀಡಿದ್ದು, ಯಕ್ಷ ಕಲಾವಿದ ಕಡಬಾಳ ಉದಯ ಹೆಗಡೆ ಅವರನ್ನು ವರಿಸಿದರು. ಅವರು ಯಕ್ಷಗಾನದ ಜೊತೆ ಅವರು ವಿವಿಧ ಬಗೆಯ ಸಾಮಾಜಿಕ ಸೇವೆ, ಜನಪರ ಕಾಳಜಿಯನ್ನು ಹೊಂದಿದ್ದಾರೆ.
ಬಡ ಕಲಾವಿದರಿಗೆ ನೆರವು ನೀಡಿದ ನೂರಾರು ಉದಾಹರಣೆಗಳಿವೆ. ಆದರೆ, ಈವರೆಗೂ ಅಶ್ವಿನಿ ಕೊಂಡದಕುಳಿ ಅವರ ವಿರುದ್ಧ ಅಂಥ ಆರೋಪ-ಅಪಸ್ವರಗಳು ಕೇಳಿಬಂದಿರಲಿಲ್ಲ. ಇದೇ ಮೊದಲ ಬಾರಿ ಅವರು ಆಡಿದ ಮಾತಿನ ವಿರುದ್ಧ ಕಲಾವಿದರೇ ಬೇಸರಿಸಿಕೊಂಡಿದ್ದು, ಕೆಲವರು `ಅಶ್ವಿನಿ ಅವರ ಜೊತೆಗೂಡಿ ಇನ್ಯಾವಾಗಲೂ ರಂಗ ಪ್ರವೇಶ ಮಾಡುವುದಿಲ್ಲ’ ಎಂದು ಶಪಥ ಮಾಡಿದ್ದಾರೆ. `ಅಶ್ವಿನಿ ಅವರು ಕ್ಷಮೆ ಕೇಳಿದರೂ ಸಹ ಅವರನ್ನು ಕ್ಷಮಿಸುವುದಿಲ್ಲ’ ಎಂದಿದ್ದಾರೆ.
ಅಶ್ವಿನಿ ಕೊಂಡದಕುಳಿ ಅವರ ತಂದೆ ರಾಮಚಂದ್ರ ಹೆಗಡೆ ಅವರ `ಯಕ್ಷಚಂದ್ರ’ ಕೃತಿ ಬಿಡುಗಡೆ ಕಾರ್ಯಕ್ರಮ ಈ ವಿವಾದದ ಮೂಲವಾಗಿದೆ. ಯಕ್ಷಚಂದ್ರ ಕೃತಿಯಲ್ಲಿ ಸಹ ವಿವಿಧ ಕಲಾವಿದರ ಬಗ್ಗೆ ಹಗುರವಾಗಿ ಬಿಂಬಿಸಿದ ಆರೋಪಗಳಿವೆ. ಬೆಂಗಳೂರಿನಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅಶ್ವಿನಿ ಕೊಂಡದಕುಳಿ ಅವರು ಪುರುಷ ಕಲಾವಿದರ ನಡತೆಯ ಬಗ್ಗೆ ಭಾಷಣ ಮಾಡಿದ್ದು, `ನನ್ನ ತಂದೆ ಅಂಥವರಲ್ಲ’ ಎಂದಿದ್ದಾರೆ. ಇದಕ್ಕೆ ಪ್ರತಿಯಾಗಿ `ರಾಮಚಂದ್ರ ಹೆಗಡೆ ಸಹ ಸಂಭಾವಿತರಲ್ಲ’ ಎಂದು ಯಕ್ಷಗಾನ ಅಕಾಡೆಮಿ ಸದಸ್ಯ ವಿದ್ಯಾದರ ಜಲವಳ್ಳಿ ಅವರು ಪ್ರತಿಕ್ರಿಯಿಸಿದ್ದಾರೆ. `ಚೌಕಿಮನೆಯಲ್ಲಿ ಸ್ತ್ರೀ ಕಲಾವಿದರ ಬಗ್ಗೆ ಕೀಳಾಗಿ ಮಾತನಾಡುತ್ತಾರೆ’ ಎಂಬುದು ಅಶ್ವಿನಿ ಕೊಂಡದಕುಳಿ ಅವರ ಅನುಭವ. `ಚೌಕಿಮನೆಯಲ್ಲಿ ಯಾರೂ ಮಹಿಳಾ ಕಲಾವಿದರ ಬಗ್ಗೆ ಕಟ್ಟದಾಗಿ ಮಾತನಾಡುವುದಿಲ್ಲ. ಅಶ್ವಿನಿ ಕೊಂಡದಕುಳಿ ಅವರನ್ನು ಸಹ ಎಲ್ಲರೂ ತಂಗಿಯ ರೀತಿ ನೋಡಿದ್ದೇವೆ’ ಎಂಬುದು ನೀಲಕೋಡ ಶಂಕರ ಹೆಗಡೆ ಅವರ ಸಮರ್ಥನೆ.
`ಯಕ್ಷಗಾನದ ಮೇರು ನಟರಾದ ಚಿಟ್ಟಾಣಿ ರಾಮಚಂದ್ರ ಹೆಗಡೆ, ಶಂಬು ಹೆಗಡೆ ಕೆರೆಮನೆ, ಚಿನ್ನಪ್ಪ ಶೆಟ್ಟಿ, ಯಲಗುಪ್ಪಾ ಸುಬ್ರಹ್ಮಣ್ಯ ಹೆಗಡೆ ಹಾಗೂ ವಿದ್ಯಾದರ ಜಲವಳ್ಳಿ ಅವರ ಬಗ್ಗೆ ಯಕ್ಷಚಂದ್ರ ಕೃತಿಯಲ್ಲಿ ತಪ್ಪಾಗಿ ಬಿಂಬಿಸಲಾಗಿದೆ. ಜಲವಳ್ಳಿ ವೆಂಕಟೇಶ ರಾವ್ ಅವರ ಬಗ್ಗೆ ಒಂದು ಕಡೆ ಹೊಗಳಿ, ಮತ್ತೊಂದು ಕಡೆ ಅವಹೇಳನ ಮಾಡಲಾಗಿದೆ. ಕೊಳಗಿಬೀಸ್ ಹಾಗೂ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಕೊಂಡದಕುಳಿ ರಾಮಚಂದ್ರ ಹೆಗಡೆ ಅವರು ಮಾಡಿದ ತಪ್ಪಿನಿಂದ ಪ್ರೇಕ್ಷಕರು ಮುಜುಗರಕ್ಕೆ ಒಳಗಾಗಿದ್ದು, ಕೃತಿಯಲ್ಲಿ ಅದನ್ನು ತಿರುಚಲಾಗಿದೆ’ ಎಂಬುದು ವಿದ್ಯಾದರ ಜಲವಳ್ಳಿ ಅವರ ಮಾತು. `ಕೃತಿಗಳು ದಾಖಲೆ ರೂಪದಲ್ಲಿ ಶಾಶ್ವತವಾಗಿರುವುದರಿಂದ ಅದರಲ್ಲಿ ತಪ್ಪು ಸಂದೇಶ ಹೋಗಬಾರದು’ ಎಂದವರು ಹೇಳುತ್ತಾರೆ. ಹೀಗಾಗಿ `ಯಕ್ಷಚಂದ್ರ ಕೃತಿಯನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಕಾನೂನು ಮೊರೆ ಹೋಗುವುದು ಅನಿವಾರ್ಯ’ ಎಂದು ಎಚ್ಚರಿಸಿದ್ದಾರೆ.