ಕಾರವಾರ ಬಳಿಯ ಹಾರವಾಡದಲ್ಲಿ ಕರ್ತವ್ಯದಲ್ಲಿರುವ ವೈದ್ಯರು ರೋಗಿಗಳಿಗೆ ಸ್ಪಂದಿಸುತ್ತಿಲ್ಲ. ಹೀಗಾಗಿ ಸೀರ್ಬರ್ಡ ಯೋಜನೆಗಾಗಿ ಭೂಮಿ ತ್ಯಾಗ ಮಾಡಿದ ಹಾರವಾಡದ ಜನರಿಗೆ ಸರಿಯಾದ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ.
`ತಮ್ಮೂರಿನ ಆಸ್ಪತ್ರೆಗೆ ನುರಿತ ವೈದ್ಯರನ್ನು ನೇಮಿಸಿ. ಕರ್ತವ್ಯದಲ್ಲಿ ಅಸಡ್ಡೆ ತೋರುವ ವೈದ್ಯರನ್ನು ಇಲ್ಲಿಂದ ಓಡಿಸಿ’ ಎಂದು ಆ ಭಾಗದ ಜನ ಆಗ್ರಹಿಸಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಶಾಸಕರಿಗೆ ಲಿಖಿತ ಅರ್ಜಿ ಸಲ್ಲಿಸಿದ್ದಾರೆ. `ತರಂಗಮೇಟ, ನಡುವಿನಕೇರಿ, ಒಕ್ಕಲಕೇರಿ, ಗಾಬಿತವಾಡ ಭಾಗದ ಜನ ಅನಾರೋಗ್ಯಕ್ಕೆ ಒಳಗಾದರೆ ಹಾರವಾಡದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದು, ಅಲ್ಲಿ ತಮಗೆ ಯೋಗ್ಯ ಚಿಕಿತ್ಸೆ ದೊರೆಯುತ್ತಿಲ್ಲ’ ಎಂದು ಆ ಭಾಗದ ಜನ ದೂರಿದ್ದಾರೆ.
`ಇಲ್ಲಿನ ವೈದ್ಯರು ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬರುತ್ತಿಲ್ಲ. ರೋಗಿಗಳ ಜೊತೆ ಅಸಭ್ಯವಾಗಿ ಮಾತನಾಡುತ್ತಿದ್ದು, ಆ ಬಗ್ಗೆ ದೂರಿದರೂ ಕ್ರಮವಾಗಿಲ್ಲ. ಅಡೆಂಟರ್ ಕೆಲಸಕ್ಕಿದ್ದವರ ಬಳಿ ರೋಗಿಗಳ ತಪಾಸಣೆ ಮಾಡಿಸುತ್ತಿದ್ದು, ಪ್ರಶ್ನಿಸಿದರೆ ಕೂಗಾಡುತ್ತಿದ್ದಾರೆ. ವೃದ್ಧರ ಜೊತೆಯೂ ವೈದ್ಯರು ಸರಿಯಾಗಿ ನಡೆದುಕೊಳ್ಳುತ್ತಿಲ್ಲ’ ಎಂದು ಜನ ಆಕ್ಷೇಪವ್ಯಕ್ತಪಡಿಸಿದ್ದಾರೆ.
ಜನರ ಮನವಿ ಆಲಿಸಿದ ಶಾಸಕ ಸತೀಶ್ ಸೈಲ್, ತಕ್ಷಣ ಆರೋಗ್ಯಾಧಿಕಾರಿಗಳಿಗೆ ಫೋನ್ ಮಾಡಿದ್ದಾರೆ. ತುರ್ತು ಕ್ರಮಕ್ಕಾಗಿ ಸೂಚನೆ ನೀಡಿದ್ದಾರೆ. ಪ್ರಮುಖರಾದ ಮಂಗಲ ಚೆಂಡೇಕರ್, ಸುಜಾತ ಹರಿಕಂತ್ರ, ಪಾರ್ವತಿ ಕುಮಾರಸ್. ಕಮಲಾಕ್ಷಿ ಹರಿಕಂತ್ರ, ಪ್ರೇಮಕಲ ದುರ್ಗೆಕರ್, ಸುಶೀಲ ದುರ್ಗೆಕರ್, ಬೇಬಿ ಹರಿಕಂತ್ರ, ವಿನಾಯಕ್ ಸಿ ಹರಿಕಂತ್ರ, ಸಂತೋಷ ಹನುಮಟೇಕರ್, ದರ್ಶನ್ ರಾಮನಾಥ್ ಇನ್ನಿತರರು ವೈದ್ಯರ ವಿರುದ್ಧ ದೂರಿದ್ದಾರೆ.