ಶಿರಸಿಯಿಂದ ಹುಬ್ಬಳ್ಳಿಗೆ ಕಾಳಸಂತೆಯಲ್ಲಿ ಸಾಗಾಟವಾಗುತ್ತಿದ್ದ ಸರ್ಕಾರಿ ಅಕ್ಕಿಯನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಅನ್ನಭಾಗ್ಯ ಯೋಜನೆಗೆ ಪೂರೈಕೆಯಾಗಬೇಕಿದ್ದ ಅಕ್ಕಿ ಇದಾಗಿದ್ದು, ಬಡವರಿಗೆ ಕೊಡಬೇಕಾದ ಅಕ್ಕಿಯನ್ನು ಮಾರಾಟ ಮಾಡಲು ಯತ್ನಿಸಿದವರನ್ನು ಜೈಲಿಗೆ ಕಳುಹಿಸಿದ್ದಾರೆ.
ಶನಿವಾರ ರಾತ್ರಿ ಮಿನಿ ಲಾರಿಯೊಂದರಲ್ಲಿ 40 ಕ್ವಿಂಟಲ್ ಅಕ್ಕಿ ಹುಬ್ಬಳ್ಳಿ ಕಡೆ ಹೊಗುತ್ತಿತ್ತು. ಅಂದಾಜು 1.36 ಲಕ್ಷ ರೂ ಮೌಲ್ಯದ ಅಕ್ಕಿಯನ್ನು ಕಳ್ಳರು ರಾಜಾರೋಷವಾಗಿ ಸಾಗಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಪೊಲೀಸರು ಆ ವಾಹನಕ್ಕೆ ಅಡ್ಡಲಾಗಿ ಕೈ ಮಾಡಿದರು. ಆಗ, ಅಕ್ಕಿ ಸಾಗಾಟ ಮಾಡುತ್ತಿದ್ದ ಮೂವರು ಸಿಕ್ಕಿಬಿದ್ದರು.
ಶಿರಸಿ ಇಸಳೂರಿನ ಸುನೀಲ್, ನೆರೆಬೈಲಿನ ಮಹಮ್ಮದ್ ಹಾಗೂ ಕಸ್ತೂರಬಾ ನಗರದ ಅಲ್ತಾಪ್ ಕಾಳಸಂತೆಯ ವ್ಯಾಪಾರಿಗಳಾಗಿದ್ದಾರೆ. ಆಹಾರ ನಿರೀಕ್ಷಕಿ ಕವಿತಾ ಪಾಟಣಕರ್ ಸ್ಥಳಕ್ಕೆ ಆಗಮಿಸಿ ಅಕ್ಕಿಯ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅನ್ನಭಾಗ್ಯ ಯೋಜನೆಯ ಅಕ್ಕಿ ಸಾಗಾಟ ಖಚಿತವಾಗಿದೆ.
ಕಳ್ಳರ ಪತ್ತೆಗೆ ಟಾಸ್ಕಪೋರ್ಸ ರಚನೆ:
ಅನ್ನಭಾಗ್ಯ ಯೋಜನೆ ಅಡಿ ನೀಡಲಾಗುವ ಅಕ್ಕಿ ದುರುಪಯೋಗ ತಡೆಗೆ ಟಾಕ್ಸಪೋರ್ಸ ರಚಿಸುವ ಬಗ್ಗೆ ಗ್ಯಾರಂಟಿ ಸಮಿತಿ ಅಧ್ಯಕ್ಷ ಸತೀಶ ನಾಯ್ಕ ಹೇಳಿದ್ದಾರೆ. ಕಂದಾಯ, ಆಹಾರ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಈ ಸಮಿತಿ ರಚಿಸಲಾಗುತ್ತದೆ ಎಂದವರು ಹೇಳಿದ್ದಾರೆ. ಈ ಬೆನ್ನಲ್ಲೆ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದೆ.
Discussion about this post