ಯಲ್ಲಾಪುರದ ಯುಗಾದಿ ಉತ್ಸವ ಅಧ್ಯಕ್ಷರಾಗಿ ವಿಶಾಲ ವಾಳಂಬಿ ಅವರು ಆಯ್ಕೆಯಾಗಿದ್ದಾರೆ. ಹಿಂದೂ ಸಂಘಟನೆ ವಿಷಯಾಗಿ ಮುಂಚೂಣಿಯಲ್ಲಿರುವ ರವೀಂದ್ರ ನಗರ ಭಾಗದ ಜನ ವಿಶಾಲ ವಾಳಂಬಿ ಅವರ ವರ್ತನೆ ವಿರುದ್ಧ ಅಸಮಧಾನವ್ಯಕ್ತಪಡಿಸಿದ್ದಾರೆ.
`ವಿಶಾಲ ವಾಳಂಬಿ ಅವರನ್ನು ಯುಗಾದಿ ಉತ್ಸವ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಮಾಡಿದಕ್ಕೆ ನಮ್ಮ ಚಕರವಿಲ್ಲ. ಆದರೆ, ಅಧ್ಯಕ್ಷರಾಗಿ ಆಯ್ಕೆ ಆದ ನಂತರ ಅವರ ವರ್ತನೆಯಲ್ಲಿ ಬದಲಾವಣೆಯಾಗಿದ್ದು, ಅದು ಸರಿಯಲ್ಲ’ ಎಂದು ರವೀಂದ್ರ ನಗರ ಪ್ರತಿನಿಧಿಸಿದ್ದ ಪಟ್ಟಣ ಪಂಚಾಯತ ಮಾಜಿ ಸದಸ್ಯ ಸೋಮೇಶ್ವರ ನಾಯ್ಕ ಅವರು ಹೇಳಿದ್ದಾರೆ. ರವೀಂದ್ರ ನಗರದ ನಿವಾಸಿಗಳಾದ ಲಕ್ಷ್ಮಣ ಬೋವಿವಡ್ಡರ್, ಶೇಖವ್ವ ಬೋವಿವಡ್ಡರ್, ದುರ್ಗಮ್ಮ ಬೋವಿವಡ್ಡರ್, ಚನ್ನಮ್ಮ ಬೋವಿವಡ್ಡರ್, ಕರಿಯವ್ವ ಹರಿಜನ, ಮಂಜುಳಾ ಹರಿಜನ ಸೇರಿ ಅನೇಕರು ತಮ್ಮ ಅಸಮಧಾನಹೊರಹಾಕಿದ್ದಾರೆ.
`ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ದಿನ ರಾತ್ರಿ ವಿಶಾಲ ವಾಳಂಬಿ ಅವರು ರವೀಂದ್ರ ನಗರಕ್ಕೆ ಆಗಮಿಸಿ ಗಲಾಟೆ ಮಾಡಿದ್ದಾರೆ. ವೈಯಕ್ತಿಕ ವಿಚಾರಕ್ಕಾಗಿ ಅವರು ಗುಂಪು ಕಟ್ಟಿಕೊಂಡು ಬಂದಿದ್ದು, ರವೀಂದ್ರ ನಗರದ ಜನರನ್ನು ಉದ್ದೇಶಿಸಿ ಕೆಟ್ಟದಾಗಿ ಬೈದಿದ್ದಾರೆ. ವಿವಿಧ ಅಕ್ರಮಗಳ ಕುರಿತು ಮಾತನಾಡಿದ ಕಾರಣ ದಾಂಧಲೆ ನಡೆಸಲಾಗಿದ್ದು, ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಆ ದಿನ ರಾತ್ರಿ ನಡೆದ ಗಲಾಟೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ಅದನ್ನು ಪರಿಶೀಲಿಸಿ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಬೇಕು’ ಎಂದು ಸೋಮೇಶ್ವರ ನಾಯ್ಕ ಅವರು ಸುದ್ದಿಗಾರರ ಮುಂದೆ ಆಗ್ರಹಿಸಿದ್ದಾರೆ. ಈ ವೇಳೆ `ತಮ್ಮ ಮನೆಯನ್ನು ಗುರಿಯಾಗಿರಿಸಿಕೊಂಡು ಕಲ್ಲು ತೂರಾಟವೂ ನಡೆದಿದೆ. ಈ ಎಲ್ಲಾ ಪ್ರಕರಣವನ್ನು ಮುಚ್ಚಿಹಾಕುವ ಹುನ್ನಾರ ನಡೆದಿದೆ’ ಎಂದು ಸೋಮೇಶ್ವರ ನಾಯ್ಕ ಅವರು ಹೇಳಿದ್ದಾರೆ.
ಪ್ರಮುಖರಾದ ಸುಜಯ ಮರಾಠಿ ಅವರು ಮಾತನಾಡಿ `ರವೀಂದ್ರ ನಗರದಲ್ಲಿ ಗಲಾಟೆ ನಡೆದ ನಂತರ ರಾತ್ರಿ ವೇಳೆ ಜನ ಒಂಟಿಯಾಗಿ ತಿರುಗಾಡಲು ಹೆದರುತ್ತಿದ್ದಾರೆ. ವೈಯಕ್ತಿಕ ದ್ವೇಷದ ಕಾರಣಕ್ಕೆ ಇಡೀ ಕೇರಿಯವರಿಗೆ ಕೆಟ್ಟದಾಗಿ ನಿಂದಿಸಿರುವುದನ್ನು ಸಹಿಸುವುದಿಲ್ಲ’ ಎಂದು ಹೇಳಿದ್ದಾರೆ. `ಹಿಂದೂತ್ವದ ಒಗ್ಗಟ್ಟು ಒಡೆಯುವ ಪ್ರಯತ್ನ ನಡೆದ ಬಗ್ಗೆ ಅನುಮಾನಗಳಿದ್ದು, ಈ ಎಲ್ಲಾ ಪ್ರಕರಣದ ಹಿಂದಿರುವ ಶಕ್ತಿ ಯಾವುದು? ಎಂದು ತನಿಖೆಯಿಂದ ಹೊರಬರಬೇಕು’ ಎಂದು ಆಗ್ರಹಿಸಿದ್ದಾರೆ. ಈ ವೇಳೆ ಆ ಭಾಗದ ಪ್ರಮುಖರಾದ ನಿರ್ಮಲಾ ಕೊಲಗೇರಿ, ಹನುಮವ್ವ ಮುಮ್ಮಿಘಟ್ಟಿ, ಯಶೋಧಾ ಹುಡಕೇಗೌಡ, ಶೋಭಾ ಮರಾಠಿ, ರಾಜು ಬದ್ದಿ, ಸಂದೀಪ ಬೋವಿ, ಗಿರೀಶ ಬೋವಿವಡ್ಡರ್ ಇತರರು ಹಾಜರಿದ್ದು, ನ್ಯಾಯ ಸಿಗದಿದ್ದರೆ ಎಲ್ಲರೂ ಮನೆಗೆ ಬೀಗ ಹಾಕಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.