ಶಿರಸಿ ಮರಾಠಿಕೊಪ್ಪದಲ್ಲಿ ಮನೆ ನಿರ್ಮಾಣ ಮಾಡುತ್ತಿರುವ ಅಜಯ ಲಾಡನವರ್ ಅವರ ಮೇಲೆ ಆಕ್ರಮಣ ನಡೆದಿದೆ. ನಿರ್ಮಾಣ ಹಂತದ ಕಟ್ಟಡದೊಳಗೆ ನುಗ್ಗಿದ ನಾಲ್ವರು ಅವರಿಗೆ ನಿಂದಿಸಿದ್ದು, ಅವರಲ್ಲಿ ಒಬ್ಬರು ಅಜಯ ಲಾಡನವರ್ ಅವರಿಗೆ ಥಳಿಸಿದ್ದಾರೆ.
ಶಿರಸಿಯ ಮರಾಠಿಕೊಪ್ಪದಲ್ಲಿ ಅಜಯ ಅರ್ಜುನ ಲಾಡನವರ್ ಅವರು ವಾಸವಾಗಿದ್ದಾರೆ. ಅವರು ಗುತ್ತಿಗೆದಾರರಾಗಿ ಕೆಲಸ ಮಾಡಿಕೊಂಡಿದ್ದಾರೆ. ಮರಾಠಿಕೊಪ್ಪದ ಸರ್ವೇ ನಂ 81/1ಅ ಕ್ಷೇತ್ರದಲ್ಲಿ ಅಜಯ ಲಾಡನವರ್ ಅವರು ಮನೆ ನಿರ್ಮಾಣದ ಕೆಲಸ ಶುರು ಮಾಡಿದ್ದಾರೆ. ಆದರೆ, ಈ ಜಾಗದ ವಿಷಯವಾಗಿ ಅದೇ ಊರಿನ ರವಿ ಹನುಮಂತ ಗೌಳಿ ಅವರು ತಕರಾರು ಸಲ್ಲಿಸಿದ್ದಾರೆ. ಆ ತಂಟೆ-ತಕರಾರಿಗೆ ಮಾನ್ಯತೇ ನೀಡದೇ ಅಜಯ ಲಾಡನವರ್ ಅವರು ಕಟ್ಟಡ ನಿರ್ಮಿಸಿದ್ದು ಹೊಡೆದಾಟಕ್ಕೆ ಕಾರಣವಾಗಿದೆ.
ಸದ್ಯ ಅಜಯ ಲಾಡನವರ್ ಅವರು ಎರಡನೇ ಸ್ಲಾಬ್ ಪೂರ್ಣಗೊಳಿಸಿದ್ದು, ಆ ಅವಧಿಯಲ್ಲಿಯೂ ರವಿ ಗೌಳಿ ಅವರು ಅಡ್ಡಿ ಮಾಡಿದ್ದಾರೆ. ಫೆ 27ರಂದು ಕಟ್ಟಡ ನಿರ್ಮಾಣ ಸ್ಥಳಕ್ಕೆ ಆಗಮಿಸಿದ ರವಿ ಗೌಳಿ ಅವರು `ಈ ಜಾಗ ನನ್ನದು’ ಎಂದು ಬೊಬ್ಬೆ ಹೊಡೆದಿದ್ದಾರೆ. ಅವರ ಜೊತೆ ಆನಂದ ಹನುಮಂತ ಗೌಳಿ, ಮನೋಜ ಹನುಮಂತ ಗೌಳಿ ಹಾಗೂ ಸಚಿನ ಕೃಷ್ಣ ಗೌಳಿ ಅವರು ಅಲ್ಲಿಗೆ ಆಗಮಿಸಿ ಗಲಾಟೆ ಮಾಡಿದ್ದಾರೆ. ಈ ವೇಳೆ ರವಿ ಗೌಳಿ ಅವರು ಅಜಯ ಲಾಡನವರ್ ಅವರ ಮೇಲೆ ಕೈ ಮಾಡಿದ್ದಾರೆ. ಹೊಡೆದಾಟ ತಪ್ಪಿಸಲು ಬಂದ ಅಜಯ ಲಾಡನವರ್ ಅವರ ಪತ್ನಿ ಮಧುಶ್ರೀ ಅವರ ಮೈ ಮುಟ್ಟಿದ್ದಾರೆ. ನಂತರ ಆ ನಾಲ್ವರು ಸೇರಿ ಅಜಯ ಲಾಡನವರ್ ಅವರಿಗೆ ಬೆದರಿಕೆ ಹಾಕಿದ್ದು, ರಕ್ಷಣೆಗಾಗಿ ಅವರು ಪೊಲೀಸರ ಮೊರೆ ಹೋಗಿದ್ದಾರೆ.