ಯಲ್ಲಾಪುರದ ಮಂಚಿಕೇರಿ ಹಾಗೂ ಸುತ್ತಲಿನ ಭಾಗದಲ್ಲಿ ಪದೇ ಪದೇ ಕಳ್ಳತನ ನಡೆಯುತ್ತಿದ್ದು, ಕಳ್ಳ ಯಾರು? ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ, ಪೊಲೀಸರ ಬಳಿ ಮಾತ್ರ ಆತನನ್ನು ಹಿಡಿಯಲು ಆಗುತ್ತಿಲ್ಲ!
ಅನೇಕರು ತಮ್ಮಲ್ಲಿರುವ ಚಿನ್ನಾಭರಣಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸುತ್ತಿದ್ದಾರೆ. ಅಗತ್ಯವಿಲ್ಲದಿದ್ದರೂ ಅಂಥವುಗಳನ್ನು ಮೈಮೇಲೆ ಧರಿಸಿ ಎಲ್ಲಾ ಕಡೆ ಸುತ್ತಾಡುತ್ತಿದ್ದಾರೆ. `ಚಿನ್ನ ಹಾಗೂ ಬೆಲೆಬಾಳುವ ಆಭರಣಗಳನ್ನು ಬ್ಯಾಂಕ್ ಲಾಕರಿನಲ್ಲಿರಿಸಿ’ ಎಂದು ಪೊಲೀಸರು ಅರಿವು ಮೂಡಿಸಿದರೂ ಜನ ಜಾಗೃತರಾಗಿಲ್ಲ. ಹೀಗಾಗಿ ಒಂಟಿ ಮನೆ, ಚಿನ್ನಾಭರಣ ಧರಿಸುವ ಮಹಿಳೆಯರ ಮನೆಯನ್ನು ಗುರಿಯಾಗಿರಿಸಿಕೊಂಡ ವ್ಯಕ್ತಿಯೊಬ್ಬ ಪದೇ ಪದೇ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದು, ಆತನನ್ನು ಬಂಧಿಸುವುದು ಮಾತ್ರ ಸವಾಲಾಗಿದೆ.
ಏನೂ ಇಲ್ಲದ ಬಡವ ದಿಢೀರ್ ಶ್ರೀಮಂತನಾಗಿರುವುದು, ಐಷಾರಾಮಿ ಕಾರುಗಳಲ್ಲಿ ಓಡಾಡುವುದು ನೋಡಿದ ಜನ ಆತನೇ ಕಳ್ಳ ಎಂದು ಗುರುತಿಸಿದ್ದಾರೆ. ಸಿಸಿ ಕ್ಯಾಮರಾ ದಾಖಲೆಗಳಲ್ಲಿ ಸಹ ಆತ ಕಳ್ಳತನ ಮಾಡಿರುವುದು ಗೊತ್ತಾಗಿದೆ. ಆದರೆ, ಪೊಲೀಸರು ಬಂಧಿಸಲು ಹೋದಾಗ ಮಾತ್ರ ಆತ ಸಿಗುತ್ತಿಲ್ಲ. ಆಗಾಗ ಊರಿನಲ್ಲಿ ಕಾಣಿಸಿಕೊಳ್ಳುವ ಆ ಕಳ್ಳನ ಬಗ್ಗೆ ಜನ ಪೊಲೀಸರಿಗೆ ಮಾಹಿತಿ ನೀಡಿದರೂ ತಕ್ಷಣ ಕಾಡು ಸೇರುವ ಅವನ ಶೋಧ ಸಾಧ್ಯವಾಗುತ್ತಿಲ್ಲ.
ಈ ಎಲ್ಲಾ ಹಿನ್ನಲೆ ಗ್ರಾಪಂ ಜನಪ್ರತಿನಿಧಿಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ ಕೆ ಭಟ್ಟ ಯಡಳ್ಳಿ ಅವರು ಶನಿವಾರ ಪೊಲೀಸರ ಮೇಲೆ ತಮ್ಮ ಅಸಮಧಾನವ್ಯಕ್ತಪಡಿಸಿದರು. `ಯಲ್ಲಾಪುರ ಪೊಲೀಸರು ತುಂಬಾ ಒಳ್ಳೆಯವರಾದ ಕಾರಣದಿಂದಲೇ ಕಳ್ಳನನ್ನು ಹಿಡಿಯಲು ಆಗುತ್ತಿಲ್ಲ’ ಎಂಬ ಅರ್ಥದಲ್ಲಿ ಅವರು ಮಾತನಾಡಿದರು. ಕೊನೆಗೆ `ಯಲ್ಲಾಪುರದಲ್ಲಿ ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿರುವಂತೆ ತೋರುತ್ತಿದೆ’ ಎಂಬ ಮಾತನ್ನು ಆಡಿದರು. ಕಳ್ಳರನ್ನು ಪತ್ತೆ ಹಚ್ಚದ ಕಾರಣ ಅನುಮಾನಗಳನ್ನುವ್ಯಕ್ತಪಡಿಸಿದರು.
`ಯಲ್ಲಾಪುರ ಪಟ್ಟಣದಲ್ಲಿಯೂ ಕಳ್ಳತನವಾಗಿದೆ. ಇಡಗುಂದಿ, ಮಂಚಿಕೇರಿ, ಕುಂದರಗಿ ಭಾಗಗಳಲ್ಲಿ ಆಗಾಗ ಕಳ್ಳತನ ನಡೆಯುತ್ತಲೇ ಇದೆ. ಸಾರ್ವಜನಿಕರ ಸಹಕಾರ ಸಿಕ್ಕರೂ ಕಳ್ಳ ಮಾತ್ರ ಸಿಗುತ್ತಿಲ್ಲ. ಕಳೆದ ಮೂರು ತಿಂಗಳಿನಿAದ ಕಳ್ಳತನ ಪ್ರಕರಣ ಹೆಚ್ಚಾಗಿದ್ದು, ಕುಂದರಗಿಯಲ್ಲಿ ನಡೆದ ಸಭೆಯಲ್ಲಿ ಡಿ ವೈ ಎಸ್ ಪಿ ಗೀತಾ ಪಾಟೀಲ ಅವರು ೧೫ ದಿನಗಳ ಒಳಗೆ ಕಳ್ಳನನ್ನು ಹಿಡಿಯುವುದಾಗಿ ನೀಡಿದ ಭರವಸೆ ಸಹ ಈಡೇರಿಲ್ಲ’ ಎಂದು ಅಸಮಧಾನವ್ಯಕ್ತಪಡಿಸಿದರು. `ಕಿರವತ್ತಿ, ಕುಂದುರ್ಗಿ ಯಲ್ಲಾಪುರದಲ್ಲಿ ಸಿಸಿ ಕ್ಯಾಮರಾಗಳಿವೆ. ಆದರೂ, ಕಳ್ಳನನ್ನು ಹಿಡಿಯಲು ಆಗಿಲ್ಲ. ಕಳ್ಳರ ಕಾಟ ಮಿತಿ ಮೀರಿದ್ದು, ಮುಂದಿನ ೧೦ ದಿನದಲ್ಲಿ ಆತನ ಬಂಧನ ಆಗದೇ ಇದ್ದರೆ ಪೊಲೀಸ್ ಠಾಣೆ ಎದುರು ಪ್ರತಿಭಟನೆ ಅನಿವಾರ್ಯ’ ಎಂದು ಎಚ್ಚರಿಸಿದರು.
ಅಡ್ಡದಾರಿಗೆ ದೊಡ್ಡವರೇ ಮಾಲಕರು!
`ಯಲ್ಲಾಪುರದಲ್ಲಿ ರಾಜಾರೋಷವಾಗಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದೆ. ಅಕ್ರಮ ಸರಾಯಿ, ಗಾಂಜಾ ಮಾರಾಟದ ಬಗ್ಗೆ ಪೊಲೀಸರು ತಲೆಕೆಡಿಸಿಕೊಂಡಿಲ್ಲ. ಹಲವು ಕಡೆ ಗಣ್ಯರೇ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ. ಪೊಲೀಸರ ದಕ್ಷತೆಗೆ ಪ್ರಭಾವಿಗಳು ಕಡಿವಾಣ ಹಾಕುತ್ತಿದ್ದಾರೆ’ ಎಂಬ ಅನುಮಾನವ್ಯಕ್ತಪಡಿಸಿದರು. ಈ ಒಕ್ಕೂಟದ ಪ್ರಮುಖರಾದ ಸತ್ಯನಾರಾಯಣ ಹೆಗಡೆ, ಕೆ ಟಿ ಹೆಗಡೆ, ಸದಾಶಿವ ಚಿಕ್ಕೋತ್ತಿ, ಸುಬ್ಬಣ್ಣ ಉದ್ದಾಬೈಲ್, ವಿಶ್ವೇಶ್ವರ ಏಕಾನ್, ಸುನಂದಾ ಮರಾಠಿ, ಪ್ರಕಾಶ ಶಾಪೂರಕರ್ ಇತರರು ಈ ಎಲ್ಲಾ ಮಾತಿಗೆ ಧ್ವನಿಗೂಡಿಸಿದರು.