ಭಟ್ಕಳದಲ್ಲಿ ಜನಿಸಿದ ವಿಚಿತ್ರ ಮಗುವೊಂದು ಪಾಲಕರ ನಿದ್ದೆಗೆಡಿಸಿದೆ. ವೈದ್ಯರು ಸಹ ಮಗುವನ್ನು ನೋಡಿ ಅಚ್ಚರಿವ್ಯಕ್ತಪಡಿಸಿದ್ದಾರೆ.
ಭಟ್ಕಳದ ಗರ್ಭಿಣಿಯೊಬ್ಬರು ಖಾಸಗಿ ನರ್ಸಿಂಗ್ ಹೋಂ’ಗೆ ನಿಯಮಿತ ಭೇಟಿ ನೀಡುತ್ತಿದ್ದರು. ಅಲ್ಲಿ ಅವರು ತಮ್ಮ ಆರೋಗ್ಯ ತಪಾಸಣೆ ನಡೆಸುತ್ತಿದ್ದು, ಮಗುವಿನ ಬೆಳವಣಿಗೆ ಸರಿಯಾಗಿಯೇ ಇತ್ತು. ಗರ್ಭಿಣಿಯ ಸ್ಕಾನಿಂಗ್ ಅಥವಾ ಇನ್ಯಾವುದೇ ಸಮಯದಲ್ಲಿ ಯಾವ ವಿಚಿತ್ರವೂ ಅರಿವಿಗೆ ಬರಲಿಲ್ಲ. ಅದೇ ಖಾಸಗಿ ನರ್ಸಿಂಗ್ ಹೋಂ’ನಲ್ಲಿ ಅವರು ಮೂರು ದಿನದ ಹಿಂದೆ ಮಗುವಿಗೆ ಜನ್ಮ ನೀಡಿದರು. ಆದರೆ, ಜನಿಸಿದ ಮಗು ಎಲ್ಲರಿಗಿಂತಲೂ ವಿಭಿನ್ನವಾಗಿತ್ತು.
ಮಗುವಿನ ಸ್ವರ, ಅಳು ಸಾಮಾನ್ಯ ಶಿಶುಗಳ ಹಾಗೆಯೇ ಇದೆ. ಆದರೆ, ದೇಹದ ರೂಪ ಮಾತ್ರ ವಿಚಿತ್ರವಾಗಿದೆ. ಮೈಮೇಲಿನ ಚರ್ಮದ ಮೇಲೆ ಮತ್ತೊಂದು ರಕ್ಷಣಾ ಪರದೆ ಬೆಳೆದಿದ್ದು, ಆ ಹೆಣ್ಣು ಮಗುವನ್ನು ನೋಡಿದ ವೈದ್ಯರು ಸಹ ಅಚ್ಚರಿವ್ಯಕ್ತಪಡಿಸಿದ್ದಾರೆ. ಇನ್ನೂ ಆ ಮಗು ಇನ್ನಿತರ ಮಕ್ಕಳಿಗಿಂತಲೂ ದಷ್ಟಪುಷ್ಟವಾಗಿದೆ. ಆರೋಗ್ಯದಲ್ಲಿಯೂ ದೊಡ್ಡ ವ್ಯತ್ಯಾಸವಿಲ್ಲ.
ಆ ಬಾಣಂತಿಯ ಮೂರನೇ ಮಗು ಇದಾಗಿದ್ದು, ಮೊದಲ ಎರಡು ಮಕ್ಕಳು ಸಹಜವಾಗಿದ್ದಾರೆ. ಸದ್ಯ ಆ ಮಗುವನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಿ ಅಲ್ಲಿ ಆರೈಕೆ ಮಾಡಲಾಗುತ್ತಿದೆ.