ಉತ್ತರ ಕನ್ನಡಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನರಿಗೆ ನೀಡಿದ ಭರವಸೆ ಪ್ರಕಾರ ಈ ಬಜೆಟಿನಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವುದಾಗಿ ಘೋಷಿಸಿದ್ದಾರೆ. ಜನರ ಬೇಡಿಕೆಯಂತೆ 100 ಕೋಟಿ ರೂ ವೆಚ್ಚದಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡುವುದಾಗಿ ಅವರು ಬಜೆಟ್ ಭಾಷಣದಲ್ಲಿ ಹೇಳಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜನ ದಶಕಗಳಿಂದಲೂ ಉತ್ತಮ ಆಸ್ಪತ್ರೆಗಾಗಿ ಹೋರಾಟ ಮಾಡುತ್ತಿದ್ದಾರೆ. ಅಪಘಾತದಂಥಹ ತುರ್ತು ಸನ್ನಿವೇಶದಲ್ಲಿ ರೋಗಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಮಂಗಳೂರು-ಗೋವಾ ಕಡೆ ಕರೆದೊಯ್ಯುತ್ತಿದ್ದಾರೆ. ಈವರೆಗೆ ಸಾವಿರಾರು ಜನ ಆಸ್ಪತ್ರೆ ಸೌಕರ್ಯ ಸಿಗದೇ ಸಾವನಪ್ಪಿದ್ದಾರೆ. ಈ ಎಲ್ಲಾ ಹಿನ್ನಲೆ ದಶಕಗಳಿಂದಲೂ ಉತ್ತಮ ಆಸ್ಪತ್ರೆಗಾಗಿ ದೊಡ್ಡ ಮಟ್ಟದ ಹೋರಾಟ-ಆಂದೋಲನ ನಡೆಯುತ್ತಿದೆ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆದಾಗಲಿನಿಂದ ಸಿದ್ದರಾಮಯ್ಯ ಅವರ ಕಾಲಾವಧಿಯವರೆಗೆ ಯಾವ ಸರ್ಕಾರವೂ ಈ ಬೇಡಿಕೆಗೆ ಸ್ಪಂದಿಸಿರಲಿಲ್ಲ.
ಈಚೆಗೆ ಜಿಲ್ಲೆಗೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಆಸ್ಪತ್ರೆ ಅಗತ್ಯದ ಬಗ್ಗೆ ವಿವರಿಸಲಾಗಿದ್ದು, ಆ ವೇಳೆ ನೀಡಿದ ಮಾತಿನ ಪ್ರಕಾರ ಸಿದ್ದರಾಮಯ್ಯ ಅವರು ಆಸ್ಪತ್ರೆ ನಿರ್ಮಿಸುವುದಾಗಿ ಬಜೆಟಿನಲ್ಲಿ ಘೋಷಣೆ ಮಾಡಿದ್ದಾರೆ. ಕಾರವಾರದ ಜೊತೆ ಯಾದಗಿರಿ ಜಿಲ್ಲೆಗೂ ಸಹ ಸಿದ್ದರಾಮಯ್ಯ ಅವರು 100 ಕೋಟಿ ರೂ ವೆಚ್ಚದ ಆಸ್ಪತ್ರೆ ಘೋಷಣೆ ಮಾಡಿದ್ದಾರೆ. ಈ ಆಸ್ಪತ್ರೆ ಕೆಲಸ ಶುರು ಮಾಡಿದರೆ ಸಮಯ, ಹಣ ಹಾಗೂ ಜನರ ಜೀವವೂ ಉಳಿಯುವ ನಿರೀಕ್ಷೆಯಿದೆ.
ಮೀನುಗಾರಿಕೆಗೂ ಮುಖ್ಯಮಂತ್ರಿ ಕೊಡುಗೆ
ಕರಾವಳಿ ಭಾಗದಲ್ಲಿ ಮೀನುಗಾರಿಕೆ ಪ್ರಮುಖ ಕಸುಬಾಗಿದ್ದು, ಅದನ್ನು ಅರಿತ ಸಿದ್ದರಾಮಯ್ಯ ಅವರು ಮೀನುಗಾರಿಕೆಗೆ ಅನುಕೂಲಕರ ಘೋಷಣೆ ಮಾಡಿದ್ದಾರೆ. ಉತ್ತರ ಕನ್ನಡದ ಜೊತೆಗೆ ದಕ್ಷಿಣ ಕನ್ನಡ, ಉಡುಪಿ ಹಾಗೂ ಒಳನಾಡಿನ ಬಾಗಲಕೋಟೆ ಜಿಲ್ಲೆಯಲ್ಲಿ ನೂತನ ಮೀನು ಮಾರುಕಟ್ಟೆ ನಿರ್ಮಿಸುವುದಾಗಿ ಘೋಷಿಸಿದ್ದಾರೆ.