`ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ಜನಪರವಾಗಿಲ್ಲ. ರೈತರ ಪರವಾಗಿಯೂ ಆ ಬಜೆಟ್ ಇಲ್ಲ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಉತ್ತರ ಕನ್ನಡ ಜಿಲ್ಲಾ ಸಮಿತಿ ಹೇಳಿದೆ. `ಇದು ಕೃಷಿ ಬಿಕ್ಕಟ್ಟು, ಗ್ರಾಮೀಣ ನಿರುದ್ಯೋಗ, ಬೆಲೆ ಏರಿಕೆ ನಿರ್ಲಕ್ಷಿಸಿ ಕಾರ್ಪೊರೇಟ್ ಭೂ ಕಬಳಿಕೆಗೆ ಪ್ರೊತ್ಸಾಹ ನೀಡುವ ಬಜೆಟ್’ ಎಂದು. ಸಮಿತಿ ಜಿಲ್ಲಾಧ್ಯಕ್ಷ ಶಾಂತರಾಮ ನಾಯಕ ಅವರು ಹೇಳಿದ್ದಾರೆ.
`ರಾಜ್ಯದ ಎಲ್ಲಡೆ ರೈತ-ಕೃಷಿ ಕೂಲಿಕಾರರ ಆತ್ಮಹತ್ಯೆ ಪ್ರಕರಣ ವರದಿ ಆಗುತ್ತಿದೆ. ವಲಸೆ, ಮರು ವಲಸೆ ಸಂಕಷ್ಟ ಹೆಚ್ಚಾಗಿದೆ. ಹೀಗಿರುವಾಗ ಗ್ರಾಮೀಣ ನಿರುದ್ಯೋಗ ಮತ್ತು ಸಾಲಭಾಧೆಗೆ ಪರಿಹಾರ ಒದಗಿಸುವಲ್ಲಿ 2026-27ರ ಈ ಬಜೆಟ್ ವಿಫಲವಾಗಿದೆ. ಕಾರ್ಪೊರೇಟ್ ಭೂ ಕಬಳಿಕೆಗೆ ದೊಡ್ಡ ಪ್ರಮಾಣದ ಉತ್ತೇಜನ ಒದಗಿಸಿದ ಬಜೆಟ್ ನೋಡಿ ನಿರಾಶೆಯಾಗಿದೆ’ ಎಂದು ಅವರು ಪ್ರತಿಕ್ರಿಯಿಸಿದ್ದಾರೆ. `ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಡೆವಲಪರ್‌ಗಳಿಗೆ ತಮ್ಮ ಕಛೇರಿ ಹಾಗೂ ಮನೆಯಲ್ಲೇ ಭೂಮಿ ನೋಂದಣಿ ಮಾಡಿಕೊಳ್ಳುವುದನ್ನು ಸಕ್ರಮಗೊಳಿಸುವ ನೋಂದಣಿ ಕಾಯ್ದೆಯ ಪ್ರಸ್ತಾಪ, ಕೃಷಿ ಭೂಮಿ ಪಹಣಿಗಳಿಗೆ ಆಧಾರ್ ಜೋಡಿಸಿ ಡಿಜಿಟಲೀಕರಣಗೊಳಿಸುವುದು ಈಗಾಗಲೇ ಕೇಂದ್ರಿಕೃತವಾಗಿ ನಿರ್ವಹಿಸಲ್ಪಡುತ್ತಿರುವುದರಿಂದ ಆ ಪ್ರಸ್ತಾಪಗಳು ರೈತರ ಕೃಷಿ ಭೂಮಿ ದಾಖಲೆಗಳನ್ನೇ ತಿರುಚುವ ಅವಕಾಶ ಒದಗಿಸಿದೆ. ನಕಲಿ ದಾಖಲಾತಿ ಸೃಷ್ಟಿಸಿ ಭೂ ಕಬಳಿಕೆ ಮಾಡುತ್ತಿದ್ದ ಖದೀಮರಿಗೆ ಇಲ್ಲಿ ಮಣೆ ಹಾಕಲಾಗಿದೆ’ ಎಂದವರು ಆತಂಕವ್ಯಕ್ತಪಡಿಸಿದ್ದಾರೆ.
`ಈ ಹಿನ್ನೆಲೆಯಲ್ಲಿ ಇಂತಹ ಯಾವುದೇ ರೀತಿಯ ತೊಂದರೆಗೆ ರೈತರನ್ನು ಸಿಲುಕಿಸುವುದಿಲ್ಲ ಎಂದು ಸ್ಪಷ್ಟ ಶ್ವೇತಪತ್ರ ಹೊರಡಿಸದೇ ಇಂತಹ ಕೆಲಸಕ್ಕೆ ಮುಂದಾಗಬಾರದು’ ಎಂದವರು ಹೇಳಿದ್ದಾರೆ. `ನವ ಉದಾರೀಕರಣ ನೀತಿಗಳಿಗೆ ಮಣೆ ಹಾಕಿರುವ ಈ ಬಜೆಟ್ ಕೂಡ ಕೃಷಿ ಉತ್ಪಾದನೆ ಹಾಗೂ ಕೃಷಿ ಭೂಮಿ ರಕ್ಷಣೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ. ಸಾಲಭಾಧೆಗೆ ತುತ್ತಾಗಿರುವ ಹಾಗೂ ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ಕಂಗೆಟ್ಟಿರುವ ರೈತ ಸಮುದಾಯಗಳಿಗೆ ಯಾವುದೇ ಪರಿಣಾಮಕಾರಿ ಪರಿಹಾರ ಒದಗಿಸಿಲ್ಲ. ಅಮೇರಿಕಾ ,ಯೂರೋಪಿಯನ್ ಒಕ್ಕೂಟ ಮುಂತಾದ ಇತ್ತೀಚಿನ ಮುಕ್ತ ವಾಣಿಜ್ಯ ಒಪ್ಪಂದಗಳಿAದ ರಾಜ್ಯದ ರೈತರನ್ನು ರಕ್ಷಿಸುವ ಈ ಸಂದರ್ಭದ ಅಗತ್ಯವಾದ ಯಾವ ಕ್ರಮವನ್ನು ಬಜೆಟ್ ಒದಗಿಸಿಲ್ಲ. ಕೃಷಿಕರ ಆದಾಯ ಮತ್ತು ಜೀವನ ಭದ್ರತೆ ಹಾಗೂ ಕೃಷಿ ಉತ್ಪಾದನೆಯಲ್ಲಿ ಗಣನೀಯ ಕೊಡುಗೆ ನೀಡುತ್ತಿರುವ ಬಗರ್ ಹುಕುಂ, ಅರಣ್ಯ ಸಾಗುವಳಿ, ಗೇಣಿ ರೈತರ ಕಲ್ಯಾಣವನ್ನು ಮತ್ತು ಅವರ ಹಕ್ಕು ಪತ್ರದ ಹಕ್ಕು ಅನ್ನು ನಿರ್ಲಕ್ಷಿಸಲಾಗಿದೆ’ ಎಂದು ಅಸಮಧಾನವ್ಯಕ್ತಪಡಿಸಿದ್ದಾರೆ.
`ಕೃಷಿ ಮಾರುಕಟ್ಟೆಯಲ್ಲಿ ಖಾಸಗಿ ಸಹಭಾಗಿತ್ವ ವನ್ನು ಪ್ರೋತ್ಸಾಹಿಸುವ ಪ್ರಸ್ತಾಪ ಅಪಾಯಕಾರಿಯಾಗಿದೆ. ಈಗಾಗಲೇ ಎಪಿಎಂಪಿ ಕಾಯ್ದೆಗಳನ್ನು ದುರ್ಬಲಗೊಳಿಸಿರುವ ಕಾರಣ ಹಾಗೂ ಖಾಸಗಿ ಸಗಟು ಮಾರುಕಟ್ಟೆಗಳಿಗೆ ಅವಕಾಶ ಕಲ್ಪಿಸಿರುವ ಕಾರಣ ಮತ್ತಷ್ಟು ತೊಂದರೆ ರೈತರಿಗೆ ಉಂಟಾಗಲಿದೆ. ಕೂಡಲೇ ಖಾಸಗಿ ಕೃಷಿ ಮಾರುಕಟ್ಟೆ ಪರ ಧೋರಣೆ ಕೈ ಬಿಟ್ಟು ಎಪಿಎಂಸಿ ಮಾರುಕಟ್ಟೆಗಳನ್ನು ಬಲಪಡಿಸಬೇಕು. ಭೂ ಸುಧಾರಣೆ ಕಾಯ್ದೆ 2020 ಸೇರಿದಂತೆ ಎಲ್ಲಾ ಕರಾಳ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕು’ ಎಂದವರು ಆಗ್ರಹಿಸಿದ್ದಾರೆ.