ಉತ್ತರ ಕನ್ನಡ ಜಿಲ್ಲೆಯ ಎಲ್ಲಡೆ ಅಡಿಕೆಗೆ ಎಲೆಚುಕ್ಕಿ ರೋಗ ವ್ಯಾಪಕ ಪ್ರಮಾಣದಲ್ಲಿ ಹರಡಿದ್ದು, ಸಾಲ ಮರು ಪಾವತಿ ಮಾಡಲಾಗದೇ ರೈತರು ಹೈರಣಾಗಿದ್ದಾರೆ. ಹೀಗಾಗಿ ಸಾಲ ಮರು ಪಾವತಿಗೆ ಹೆಚ್ಚುವರಿ ಸಮಯ ಸಿಗುವ ಸಾಧ್ಯತೆಗಳು ಹೆಚ್ಚಿನ ಪ್ರಮಾಣದಲ್ಲಿದೆ.
ಶುಕ್ರವಾರ ಲೀಡ್ ಬ್ಯಾಂಕಿನ ಸಭೆ ನಡೆಸಿದ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿಲೀಷ್ ಶಶಿ ಅವರು ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. `ಅಡಿಕೆ ಬೆಳೆಗಾರರು ಎಲೆಚುಕ್ಕಿ ರೋಗದ ಕಾರಣ ತೀರಾ ಸಂಕಷ್ಟಕ್ಕೆ ಒಳಗಾಗಿರುವ ಹಿನ್ನಲೆಯಲ್ಲಿ ಕೃಷಿ ಮಾಧ್ಯಮಿಕ ಸಾಲ ಮತ್ತು ಕೆಸಿಸಿ ಸಾಲದ ಮರುಪಾವತಿಯನ್ನು ಮುಂದೂಡುವ ಕುರಿತು ನಿರ್ಣಯ ಸಿದ್ಧಪಡಿಸಿ. ಆ ನಿರ್ಣಯವನ್ನು ರಿಸರ್ವ ಬ್ಯಾಂಕಿಗೆ ಕಳುಹಿಸಿ’ ಎಂದವರು ಸೂಚನೆ ನೀಡಿದ್ದಾರೆ. ಅಡಿಕೆ ಬೆಳೆಗಾರರು ಎಲೆಚುಕ್ಕೆ ರೋಗದ ಕಾರಣದಿಂದ ಸಂಕಷ್ಟಕೆ್ಕ ಒಳಗಾಗಿರುವ ಹಿನ್ನೆಲೆಯಲ್ಲಿ ಸಹಕಾರ ಸಂಘಗಳಲ್ಲಿ ಕೃಷಿಕ ಸದಸ್ಯರು ಏಪ್ರಿಲ್ 15ಕ್ಕೆ ಮರುಪಾವತಿಸಬೇಕಾದ ಕೃಷಿ ಮಾಧ್ಯಮಿಕ ಸಾಲದ ಕಂತುಗಳನ್ನು ಒಂದು ವಷÀðದ ಅವಧಿಗೆ ಮುಂದೂಡುವ ಹಾಗೂ ಏಪ್ರಿಲ್ 30ಕ್ಕೆ ತುಂಬಬೇಕಾದ ಕೆಸಿಸಿ ಸಾಲವನ್ನು ಒಂದು ವರ್ಷದವರೆಗೆ ವಢಾಯಿಸಿ ಕೊಡುವ ಕುರಿತು ಮನವಿ ಸಲ್ಲಿಸಿದ್ದಾರೆ. ಶಿರಸಿಯ ತೋಟಗಾರ್ಸ್ ರೂರಲ್ ಕೋ ಆಪರೇಟಿವ್ ಅಗ್ರಿಕಲ್ಚರಲ್ ಸೊಸೈಟಿಯ ಅಧಿಕಾರಿಗಳು, ಕೃಷಿಕರ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಪರವಾಗಿ ಸಲ್ಲಿಸಿದ ಮನವಿಯನ್ನು ದಿಲೀಷ್ ಶಶಿ ಅವರು ಪುರಸ್ಕರಿಸಿದ್ದಾರೆ. ಹೀಗಾಗಿ ಅಡಿಕೆ ಬೆಳೆಗಾರರ ಸಂಕಷ್ಟ ಪರಿಸ್ಥಿತಿಯ ಕುರಿತು ಸಹಮತ ವ್ಯಕ್ತಪಡಿಸಿ, ಸಾಲ ಮರುಪಾವತಿ ಅವಧಿ ಮುಂದೂಡುವ ಬಗ್ಗೆ ಸಭೆಯ ನಿರ್ಣಯ ಸಿದ್ದಪಡಿಸುವಂತೆ ಅವರು ಬ್ಯಾಂಕ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
`ಉತ್ತರ ಕನ್ನಡ ಜಿಲ್ಲೆಯಲ್ಲಿ ಬ್ಯಾಂಕ್‌ಗಳ ಸಾಲ ಮತ್ತು ಠೇವಣಿ ಅನುಪಾತ ಶೇ 46.6 ಇದ್ದು, ಈ ಪ್ರಮಾಣವು ರಿಸರ್ವ್ ಬ್ಯಾಂಕ್ ಮಾರ್ಗಸೂಚಿಯಂತೆ ಕನಿಷ್ಠ ಶೇ 60 ಇರಬೇಕಾಗಿದೆ. ಹೀಗಾಗಿ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾಲಗಳನ್ನು ವಿತರಣೆ ಮಾಡಬೇಕು’ ಎಂದವರು ಹೇಳಿದ್ದಾರೆ. `ವಸತಿ ಹಾಗೂ ಶೈಕ್ಷಣಿಕ ಉದ್ದೇಶ, ಸ್ವ ಉದ್ಯೋಗ ಕೈಗೊಳ್ಳುವವರು, ಸರಕಾರಿ ಯೋಜನೆಗಳ ಫಲಾನುಭವಿಗಳ ಅರ್ಜಿಗಳನ್ನು ತಿರಸ್ಕರಿಸದೇ ಅರ್ಜಿಗಳಲ್ಲಿನ ದೋಷಗಳನ್ನು ಸರಿಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಸಾಲದ ಅರ್ಜಿಗಳನ್ನು ಮಂಜೂರು ಮಾಡಬೇಕು’ ಎಂದಿದ್ದಾರೆ. `ಬ್ಯಾಂಕ್‌ಗಳಲ್ಲಿ ದೊರೆಯುವ ವಿವಿಧ ಸಾಲ ಯೋಜನೆಗಳ ಕುರಿತಂತೆ ಜಿಲ್ಲೆಯಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಚಾರ ಚಟುವಟಿಕೆಗಳನ್ನು ಕೈಗೊಳ್ಳುವಂತೆ ಮತ್ತು ಖಾಸಗಿ ಬ್ಯಾಂಕ್ ಗಳು ಸಾಲ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವ ಕುರಿತು ಪರಿಶೀಲನೆ ನಡೆಸಿ’ ಎಂದು ತಿಳಿಸಿದ್ದಾರೆ. ಈ ವೇಳೆ `ಪ್ರಸಕ್ತ ಸಾಲಿನ ಡಿಸೆಂಬರ್ ವರೆಗೆ ಜಿಲ್ಲೆಯ ಬ್ಯಾಂಕ್‌ಗಳಲ್ಲಿ 25208 ಕೋಟಿ ರೂ ಠೇವಣಿ ಸಂಗ್ರಹಿಸಿದ್ದು, 12013 ಕೋಟಿ ರೂ ಸಾಲ ವಿತರಿಸಲಾಗಿದೆ’ ಎಂದು ಬ್ಯಾಂಕ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಸೋಮಶೇಖರ್ ಮೇಸ್ತಾ, ಯೋಜನಾ ನಿರ್ದೇಶಕ ಕರೀಂ ಅಸಾದಿ, ಮುಖ್ಯ ಲೆಕ್ಕಾಧಿಕಾರಿ ಆನಂದ್ ಸಾ ಹಬೀಬ್, ನಬಾರ್ಡ್ ಮೆನೇಜರ್ ಸುಶೀಲ್ ನಾಯ್ಕ, ಲೀಡ್ ಬ್ಯಾಂಕ್ ಮೆನೇಜರ್ ರಾಜಪ್ಪ, ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಬ್ಯಾಂಕ್‌ಗಳ ಅಧಿಕಾರಿಗಳು ಉಪಸ್ಥಿತರಿದ್ದರು.