ಸಣ್ಣ-ಪುಟ್ಟ ಸರ್ಕಾರಿ ಜಾಗ ಅತಿಕ್ರಿಮಿಸಿ ರೆಸಾರ್ಟ ಹಾಗೂ ಹೋಂ ಸ್ಟೇ ನಿರ್ಮಿಸಿದವರಿಗೆ ಸರ್ಕಾರ ಜಾಗ ಖಾಲಿ ಮಾಡುವಂತೆ ನೋಟಿಸ್ ನೀಡಿದ್ದು, ಇದರ ವಿರುದ್ಧ ಕುಮಟಾದ ದುಬ್ಬಿನಶಶಿ ಭಾಗದ ಜನ ಸಿಡಿದೆದ್ದಿದ್ದಾರೆ. `ನಮಗೂ ಬದುಕಲು ಬಿಡಿ’ ಎಂದು ಅಲ್ಲಿನವರು ಪ್ರತಿಭಟಿಸಿದ್ದು, ಕ್ಷೇತ್ರದ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕೆ ತೆರಳಿ ಸಮಾಧಾನ ಮಾಡಿದ್ದಾರೆ. ಈ ನಡುವೆ ಅನೇಕರು ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಷೆಯನ್ನು ತಂದಿದ್ದಾರೆ.
ಕುಮಟಾದ ನಾಡುಮಾಸ್ಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಕಡಲತೀರಗಳಲ್ಲಿನ ಸರ್ಕಾರಿ ಜಾಗದಲ್ಲಿರುವ ರೆಸಾರ್ಟ-ಹೊಟೇಲ್ ತೆರವು ಮಾಡುವಂತೆ ತಾಲೂಕು ಆಡಳಿತ ಆದೇಶಿಸಿದೆ. ಭಾನುವಾರ ಅಪರ ಜಿಲ್ಲಾಧಿಕಾರಿ ಶಾಜಿದ್‌ಮುಲ್ಲಾ, ಕುಮಟಾ ಉಪವಿಭಾಗಾಧಿಕಾರಿ ಶ್ರವಣಕುಮಾರ, ಕುಮಟಾ ತಹಶೀಲ್ದಾರ ಶ್ರೀಕೃಷ್ಣ ಕಾಮಕರ, ಪಿಐ ಶ್ರೀಧರ ಎಸ್ ಆರ್ ಅವರ ಜೊತೆ ಇನ್ನಿತರ ಅಧಿಕಾರಿಗಳು ಸ್ಥಳ ಭೇಟಿ ಮಾಡಿದ್ದಾರೆ. ಏಕಾಏಕಿ ತೆರವು ಆದೇಶದ ವಿರುದ್ಧ ಅಲ್ಲಿನವರು ಆಕ್ರೋಶವ್ಯಕ್ತಪಡಿಸಿದ್ದಾರೆ. ಚಿಕ್ಕ ಉದ್ಯಮ ಮಾಡಿಕೊಂಡಿರುವ ಸ್ಥಳೀಯ ಮೀನುಗಾರರ ಜೊತೆ ಇನ್ನಿತರರಿಗೂ ತೊಂದರೆಯಾಗಿರುವ ಬಗ್ಗೆ ಅಲ್ಲಿವರು ಶಾಸಕರಲ್ಲಿ ದೂರಿದ್ದಾರೆ.
ಈ ವೇಳೆ ದಿನಕರ ಶೆಟ್ಟಿ ಅವರು ಕಡಲತೀರದ ಪ್ರವಾಸೋದ್ಯಮ ನಡೆಸಲು ಸಹಕರಿಸುವ ಜೊತೆ ಮೀನುಗಾರರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದರು. `ಈ ಬಗ್ಗೆ ಸಚಿವರ ಗಮನಕ್ಕೂ ತರುವೆ’ ಎಂದು ಹೇಳಿದರು. ಸದನದಲ್ಲಿಯೂ ವಿಷಯ ಪ್ರಸ್ತಾಪಿಸುವ ಆಶ್ವಾಸನೆ ನೀಡಿದರು. ಭಾವಿಕೊಡ್ಲ ಗ್ರಾಮದ ದುಬ್ಬನಸಶಿ, ಹಾರೂಮಾಸ್ಕೇರಿ ಗ್ರಾಮ, ನಾಡುಮಾಸ್ಕೇರಿ ಗ್ರಾಮದ ಗಂಗೆಕೊಳ್ಳದ ಒಟ್ಟು 52 ರೆಸಾರ್ಟಗಳು ಅತಿಕ್ರಮಣ ಜಾಗದಲ್ಲಿದೆ. ಈ ಪೈಕಿ ಎಂಟು ರೆಸಾರ್ಟನವರು ನ್ಯಾಯಾಲಯದಿಂದ ತಡೆಯಾಜ್ಷೆ ತಂದಿದ್ದು, ಅದಾದ ನಂತರ ಇನ್ನಷ್ಟು ರೆಸಾರ್ಟಿನವರು ತಡೆಯಾಜ್ಞೆ ತಂದಿದ್ದಾರೆ. ಅದಾಗಿಯೂ `ಎಲ್ಲರೂ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಬೇಕು’ ಎಂದು ಅಧಿಕಾರಿಗಳು ಸೂಚಿಸಿದ್ದು, ಅದು ಆಕ್ರೋಶಕ್ಕೆ ಕಾರಣವಾಗಿದೆ.
ಜಿ ಪಂ ಮಾಜಿ ಸದಸ್ಯ ಪ್ರದೀಪ ನಾಯಕ, ಪ್ರಮುಖರಾದ ನಾಗರಾಜ್ ನಾಯ್ಕ್, ಗಂಗಾಧರ್ ಗೌಡ, ವಾಸುದೇವ್ ಮೋರ್ಜೆ, ರತೀಶ್ ಕುರ್ಲೆ, ಮಹೇಶ ಶೆಟ್ಟಿ, ರೂಪಾ ಅಂಕೋಲೆಕರ್, ಧನಶ್ರೀ ಅಂಕೋಲೇಕರ್, ಕುಮಾರ್ ಕೌರಿ, ರಾಜೇಶ್ ಚುಡನ್ಕರ್, ನಾಗೇಶ್ ಗೌಡ ಇತರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.