ಕುಮಟಾದ ನಾಡುಮಾಸ್ಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಗಂಗೆಕೊಳ್ಳ ಕಡಲತೀರದ ಬಳಿಯಿದ್ದ ಅಕ್ರಮ ರೆಸಾರ್ಟುಗಳನ್ನು ಅದರ ಮಾಲಕರೇ ಧ್ವಂಸ ಮಾಡಿದ್ದಾರೆ. ಸರ್ಕಾರ ನೀಡಿದ ನೋಟಿಸಿನ ಅನ್ವಯ ರೆಸಾರ್ಟುಗಳನ್ನು ಕೆಡವಲಾಗುತ್ತಿದೆ.
Advertisement. Scroll to continue reading.
ನಾಡುಮಾಸ್ಕೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ಗಂಗೆಕೊಳ್ಳ ಕಡಲತೀರ ಸರ್ಕಾರಕ್ಕೆ ಸೇರಿದ್ದು, ಆ ಪ್ರದೇಶದಲ್ಲಿ ಅನೇಕರು ರೆಸಾರ್ಟ, ಹೊಟೇಲ್ ನಿರ್ಮಿಸಿದ್ದರು. ಅದನ್ನು ತೆರವು ಮಾಡುವಂತೆ ಸರ್ಕಾರ ಸೂಚಿಸಿದ್ದು, ಅನೇಕರು ಆಕ್ರೋಶವ್ಯಕ್ತಪಡಿಸಿದ್ದರು. ಸರ್ಕಾರದ ನಡೆಗೆ ಪ್ರತಿಭಟನೆಯನ್ನು ಸಹ ಮಾಡಿದ್ದರು. ಅಂತಿಮವಾಗಿ ನ್ಯಾಯಾಲಯದ ಆದೇಶದ ಅನ್ವಯ ಅಕ್ರಮ ಕಟ್ಟಡಗಳ ತೆರವು ಅನಿವಾರ್ಯವಾಗಿದ್ದು, ಸ್ವಯಂ ಪ್ರೇರಣೆಯಿಂದ ತೆರವು ಮಾಡದೇ ಇದ್ದರೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಲಾಗಿತ್ತು.
ಸರ್ಕಾರಿ ಕಾರ್ಯಾಚರಣೆಗೂ ಮುನ್ನ ಅಲ್ಲಿನ ಕೆಲವರು ಕಟ್ಟಡ ತೆರವು ಮಾಡಿದ್ದಾರೆ. `ಕಟ್ಟಡ ತೆರವಿನಿಂದ ತಮ್ಮ ಉದ್ಯಮಕ್ಕೆ ತೊಂದರೆಯಾಗುತ್ತದೆ’ ಎಂದು ಅನೇಕರು ಹೇಳಿದರಾದರೂ ಕೊನೆಗೆ ಅವುಗಳನ್ನು ತೆರವು ಮಾಡಲು ಒಪ್ಪಿದರು. ಗಂಗೆಕೊಳ್ಳ ನಕ್ಷತ್ರ ಬೀಚ್ ಸ್ಟೇಯ ಗಣಪತಿ ನಾರಾಯಣ ನಾಯ್ಕ, ನಕ್ಷತ್ರಾ ಲೀಜ್‌ನ ಮಂಜು ಹನುಮಂತ ನಾಯ್ಕ, ಬೀಚ್ ಫ್ರಂಟ್‌ನ ಸಚಿನ್ ನಾಯ್ಕ, ಓಷಿಯನ್ ಎಡ್ಜ್ ಮಂಗೇಶ ಗೌಡ, ಗ್ಯಾಲೆಕ್ಸಿನ ಓಮು ಗೌಡ, ಗಂಗಾಬೀಚ್, ಬ್ಲಯೂ ಲೋಗನ್ ನೀರಜ್ ರೆಡ್ಡಿ, ಗೋಪಾಲ ರೆಸ್ಟೋರೆಂಟ್ ವೆಂಕಟೇಶ ಗೋಪಾಲ ತಾಂಡೇಲ ಅವರು ಸ್ವಯಂ ಪ್ರೇರಣೆಯಿಂದ ಕಟ್ಟಡ ತೆರವು ಮಾಡಿದರು.