ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಐವರಿಗೆ ಮುಂದಿನ ಶಿಕ್ಷಣಕ್ಕೆ ನೆರವು ನೀಡುವುದಾಗಿ ಅಂಕೋಲಾ ಹಟ್ಟಿಕೇರಿಯ ಮಾವಿನಕೇರಿ ನಿತ್ಯಾನಂದ ರತ್ನಾಕರ ನಾಯ್ಕ ಅವರು ಘೋಷಿಸಿದ್ದಾರೆ. ತಮ್ಮ ಜನ್ಮದಿನದ ಅಂಗವಾಗಿ ಅವರು ಈ ಘೋಷಣೆ ಮಾಡಿದ್ದಾರೆ.
Advertisement. Scroll to continue reading.
ಅವರ್ಸಾದ ಶ್ರೀ ಕಾತ್ಯಾಯನಿ ಪ್ರೌಢಶಾಲೆಯಲ್ಲಿ ಅವರು ಈ ಘೋಷಣೆ ಮಾಡಿದರು. `ಸರ್ಕಾರಿ ಶಾಲಾ ಮಕ್ಕಳು ಉತ್ತಮವಾಗಿ ಬೆಳೆಯಬೇಕು. ಅವರಿಗೆ ಉತ್ತೇಜನ ಸಿಗಬೇಕು’ ಎಂಬ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದರು. ನಿತ್ಯಾನಂದ ನಾಯ್ಕ ಅವರು ಈ ಹಿಂದೆಯೂ ಸಾಕಷ್ಟು ಜನರಿಗೆ ನೆರವಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವವರಿಗೆ ನೆರವು, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಕೈಲಾದ ಸಹಾಯ, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ, ಧಾರ್ಮಿಕ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಬೆಂಬಲ ನೀಡುವ ಮೂಲಕ ಅವರು ಜನರ ಮನಸ್ಸು ಗೆದ್ದಿದ್ದಾರೆ.
ಕಾರವಾರ – ಅಂಕೋಲಾ ಭಾಗದಲ್ಲಿ ಬಸ್ ಸೌಲಭ್ಯ ಸಮಸ್ಯೆಗಳ ಕುರಿತು ನಿರಂತರವಾಗಿ ಹೋರಾಟ ನಡೆಸಿ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಿಸುವಲ್ಲಿಯೂ ಅವರ ಕೊಡುಗೆ ಅಪಾರ. ವಿಶೇಷವಾಗಿ ರಾತ್ರಿ ವೇಳೆಯಲ್ಲಿ ಕಾರವಾರದಿಂದ ಅಂಕೋಲಾ ಕಡೆ ತೆರಳಲು ಬಸ್ ಸೌಲಭ್ಯ ಇಲ್ಲದ ಸಂದರ್ಭಗಳಲ್ಲಿ ತಮ್ಮದೇ ಸ್ವಂತ ಟೆಂಪೋದಲ್ಲಿ ಹಿರಿಯ ನಾಗರಿಕರು ಹಾಗೂ ಮಹಿಳೆಯರನ್ನು ಸುರಕ್ಷಿತವಾಗಿ ತಲುಪಿಸಿದ ನಿದರ್ಶನಗಳಿವೆ. ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸಿರುವ ಅವರು ಟೆಂಪೋ ಚಾಲಕರ ಯೂನಿಯನ್ ಅಧ್ಯಕ್ಷರಾಗಿಯೂ ಗುರುತಿಸಿಕೊಂಡಿದ್ದಾರೆ. ಜನಶಕ್ತಿ ವೇದಿಕೆ ಸಂಘಟನೆಯ ಸಂಘಟನಾ ಕಾರ್ಯದರ್ಶಿಯಾಗಿಯೂ ಕೆಲಸ ಮಾಡಿದ್ದಾರೆ.