ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕಿಗೆ ಕಾಡು ಪ್ರಾಣಿಯೊಂದು ಅಡ್ಡ ಬಂದಿದ್ದು, ಕಾಡು ಪ್ರಾಣಿ ರಕ್ಷಿಸುವ ದಾವಂತದಲ್ಲಿ ಆ ಬೈಕು ಮಹಿಳೆಯೊಬ್ಬರಿಗೆ ಗುದ್ದಿದೆ. ಪರಿಣಾಮ ರಸ್ತೆ ಅಂಚಿನಲ್ಲಿ ನಡೆದು ಹೋಗುತ್ತಿದ್ದ ಮಹಿಳೆ ಗಂಭೀರ ಪ್ರಮಾಣದಲ್ಲಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಭಟ್ಕಳದ ಮುರುಡೇಶ್ವರ ಬಳಿಯ ಬೈಲೂರಿನಲ್ಲಿ ಈ ಅಪಘಾತ ನಡೆದಿದೆ. ಬೈಲೂರು ಮಡಿಕೇರಿಯ ಶೈಲಾ ನಾಗೇಶ ನಾಯ್ಕ (43) ಅವರಿಗೆ ಬೈಕ್ ಡಿಕ್ಕಿಯಾಗಿದೆ. ಮಡಿಕೇರಿಯ ಮೋಹನ ಮಂಜುನಾಥ ನಾಯ್ಕ ಅವರು ಶೈಲಾ ನಾಯ್ಕ ಅವರಿಗೆ ಬೈಕ್ ಗುದ್ದಿದವರಾಗಿದ್ದು, ವೇಗವಾಗಿ ಬೈಕ್ ಓಡಿಸಿದ ಕಾರಣ ಮೋಹನ ನಾಯ್ಕ ಅವರ ವಿರುದ್ಧ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.
ಮಾ 11ರಂದು ಬೈಲೂರು ರಸ್ತೆಯ ಮಾರ್ಕಂಡೇಶ್ವರ ರಸ್ತೆ ಸಮೀಪ ಕಡವೆ ಓಡಾಟ ನಡೆದಿದ್ದು, ಆ ಕಡವೆ ಬೈಕಿಗೆ ಅಡ್ಡ ಬಂದಿದೆ. ಇದರಿಂದ ಮೋಹನ ನಾಯ್ಕ ಅವರು ಒಮ್ಮೆಲೆ ಬೈಕಿಗೆ ಬ್ರೆಕ್ ಹಾಕಿದ್ದು, ಬೈಕು ನಿಯಂತ್ರಣ ತಪ್ಪಿದೆ. ಈ ವೇಳೆ ರಸ್ತೆ ಅಂಚಿನಲ್ಲಿ ಮಹಿಳೆ ನಡೆದು ಹೊಗುತ್ತಿದ್ದು ಅವರಿಗೆ ಆ ಬೈಕು ಡಿಕ್ಕಿ ಹೊಡೆದಿದೆ. ಶೈಲಾ ನಾಯ್ಕ ಅವರ ತಲೆ, ಕಣ್ಣು, ಕಿವಿಗೆ ಗಾಯವಾಗಿದೆ.