ರೈತನ ಬದುಕಿಗೆ ನೆರವಾಗಿದ್ದ ಪವರ್ ಟಿಲ್ಲರಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಅದನ್ನೇ ನಂಬಿ ಬದುಕುತ್ತಿದ್ದ ರೈತನಿಗೆ 2 ಲಕ್ಷ ರೂ ಹಾನಿಯಾಗಿದೆ.
ದಾಂಡೇಲಿಯ ರಾಮನಗರದಲ್ಲಿ ಕಿಡಿಗೇಡಿಗಳ ಕಾಟ ಜೋರಾಗಿದೆ. ಇಲ್ಲಿನ ಕಸಾರಲೆ ಗ್ರಾಮದಲ್ಲಿ ದುಷ್ಕರ್ಮಿಗಳು ಪವರ್ ಟಿಲ್ಲರ್ ಮೇಲೆ ಬೆಂಕಿಯ ದಾಳಿ ಮಾಡಿದ್ದಾರೆ. ಶೆಡ್ಡಿನಲ್ಲಿರಿಸಲಾಗಿದ್ದ ಪವರ್ ಟಿಲ್ಲರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಗುರುವಾರ ಮಧ್ಯಾಹ್ನ ಈ ಅವಘಡ ನಡೆದಿದ್ದು, ನೀರು ತಂದು ಆರಿಸುವಷ್ಟರಲ್ಲಿ ಪವರ್ ಟಿಲ್ಲರ್ ಬಳಕೆಗೆ ಬಾರದ ರೀತಿ ಸುಟ್ಟಿದೆ. ಅದೇ ಗ್ರಾಮದ ರೈತ ಮಹಾದೇವ ಪಾವಶೆ ಅವರಿಗೆ ಸೇರಿದ ಪವರ್ ಟಿಲ್ಲರ್ ಸುಟ್ಟು ಕರಕಲಾಗಿದೆ. ಕಿಡಿಗೇಡಿಗಳು ಶೆಡ್ಡಿಗೆ ಬೆಂಕಿ ಹಚ್ಚಿದ್ದು, ಆ ಬೆಂಕಿ ಪವರ್ ಟಿಲ್ಲರಿಗೂ ತಾಗಿದೆ. ಈ ಮಾರ್ಗವಾಗಿ ಹೋಗುತ್ತಿದ್ದ ಮತ್ತೊಬ್ಬ ರೈತರು ಈ ವಿಷಯವನ್ನು ಎಲ್ಲಡೆ ಮುಟ್ಟಿಸಿದ್ದಾರೆ.
ಸ್ಥಳಕ್ಕೆ ಮಾಲಕ ತಲುಪುವಷ್ಟರಲ್ಲಿ ಪವರ್ ಟಿಲ್ಲರ್ ಸಂಪೂರ್ಣ ಸುಟ್ಟಿದ್ದು, ಊರಿನಲ್ಲಿರುವ ಅಜ್ಞಾತ ವ್ಯಕ್ತಿಯ ಬಗ್ಗೆ ಅನುಮಾನ ಶುರುವಾಗಿದೆ. ಈ ಬಗ್ಗೆ ತನಿಖೆ ಅಗತ್ಯ ಎಂದು ಜನ ಆಗ್ರಹಿಸಿದ್ದಾರೆ.