ಕಾರವಾರ ಕದ್ರಾದ ರೀಶೆಲ್ ಡಿಸೋಜಾ ಆತ್ಮಹತ್ಯೆ ಪ್ರಕರಣದಿಂದ ಜೈಲು ಸೇರಿದ್ದ ಜಿ ಪಂ ಮಾಜಿ ಸದಸ್ಯೆ ಚೈತ್ರಾ ಕೋಠಾರಕರ್ ಅವರ ಪುತ್ರ ಚಿರಾಗ ಕೋಠಾರಕರ್ ಅವರಿಗೆ ಜಾಮೀನು ಸಿಕ್ಕಿದೆ. ಧಾರವಾಡ ಹೈಕೋರ್ಟ ಶರತ್ತುಬದ್ಧ ಜಾಮೀನು ಮಂಜುರಿ ಮಾಡಿದೆ.
ಜನವರಿ 9ರಂದು ರೀಶೆಲ್ ಡಿಸೋಜಾ ಅವರು ಆತ್ಮಹತ್ಯೆಗೆ ಶರಣಾಗಿದ್ದರು. ರೀಶೆಲ್ ಡಿಸೋಜಾ ಆತ್ಮಹತ್ಯೆಗೆ ಚಿರಾಗ ಕೋಠಾರಕರ್ ಕಾರಣ ಎಂಬ ಆರೋಪವ್ಯಕ್ತವಾಗಿತ್ತು. ಚಿರಾಗ ಕೋಠಾರಕರ್ ವಿರುದ್ಧ ಅತ್ಯಾಚಾರ ಆರೋಪ ಕೇಳಿ ಬಂದಿದ್ದು, ಆರೋಪಿ ಹಾಗೂ ಸಾವನಪ್ಪಿದ ಯುವತಿ ನಡೆಸಿದ ವಾಟ್ಸಪ್ ಸಂಭಾಷಣೆಯೂ ಬಹಿರಂಗವಾಗಿತ್ತು. ರೀಶೆಲ್ ಡಿಸೋಜಾ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆಯೂ ನಡೆದಿತ್ತು.
ಪ್ರತಿಭಟನೆ, ಪೊಲೀಸ್ ಅಧಿಕಾರಿಯೊಬ್ಬರ ಅಮಾನತು ನಂತರ ಆರೋಪಿ ಚಿರಾಗ ಕೋಠಾರಕರ್ ಸಿಕ್ಕಿ ಬಿದ್ದಿದ್ದರು. ಜನವರಿ 30ರಿಂದ ಮಾರ್ಚ 3ರವರೆಗೂ ಚಿರಾಗ ಕೋಠಾರಕರ್ ಜೈಲು ವಾಸ ಅನುಭವಿಸಿದ್ದು, ಕಾರವಾರ ನ್ಯಾಯಾಲಯ ಜಾಮೀನು ಅರ್ಜಿ ತಿರಸ್ಕರಿಸಿತ್ತು. ಈ ಹಿನ್ನಲೆ ಧಾರವಾಡ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ಹೈಕೋರ್ಟ ಜಾಮೀನು ಮಂಜೂರಿ ಮಾಡಿದೆ.