ಯಲ್ಲಾಪುರದ ಲಾಂಪ್ಸ್ ಸೊಸೈಟಿಯಲ್ಲಿ ಅವ್ಯವಹಾರ ನಡೆದಿದೆ. ಲಾಂಪ್ಸ್ ಕಾರ್ಯದರ್ಶಿ ಹುದ್ದೆ ಅನುಭವಿಸಿದ ವ್ಯಕ್ತಿಯೇ ಸಂಘಕ್ಕೆ ಮೋಸ ಮಾಡಿದ್ದಾರೆ.
Advertisement. Scroll to continue reading.
ಯಲ್ಲಾಪುರದ ಲಾಂಪ್ಸ್ ಸೊಸೈಟಿಯೂ (ಸಹ್ಯಾದ್ರಿ ಗಿರಿಜನ ದೊಡ್ಡ ಪ್ರಮಾಣದ ವಿವಿದೋದ್ಧೇಶ ಸಹಕಾರಿ ಸಂಘ) ಗುಡ್ಡಗಾಡು ಜನರ ಅಭಿವೃದ್ಧಿಗಾಗಿ ಹುಟ್ಟಿಕೊಂಡಿದ್ದು, ಕಿರು ಅರಣ್ಯ ಉತ್ಪನ್ನಗಳ ಸಂಗ್ರಹಣೆ ಮೂಲಕ ಹೆಸರುಪಡೆದಿದೆ. 2012ರಿಂದ 2022ರವರೆಗೆ ಈ ಸೊಸೈಟಿಯ ಕಾರ್ಯದರ್ಶಿಯಾಗಿ ರಾಮಚಂದ್ರ ಬಾರ್ಕೆಲ್ಯ ಸಿದ್ದಿ ಅವರು ಕಾರ್ಯ ನಿರ್ವಹಿಸಿದ್ದು, ಅವರ ವಿರುದ್ಧವೇ ಇದೀಗ ಆರೋಪ ಕೇಳಿಬಂದಿದೆ.
ಯಲ್ಲಾಪುರ ಉಮ್ಮಚ್ಗಿಯ ಕೋಟೆಮನೆ ರಾಮಚಂದ್ರ ಸಿದ್ದಿ ಅವರು 2016ರಿಂದ 2019ರ ಅವಧಿಯಲ್ಲಿ ಅವಧಿಯಲ್ಲಿ ಹಣ ಹಾಗೂ ಸೊಸೈಟಿ ಸಂಗ್ರಹಿಸಿದ ಕಿರು ಅರಣ್ಯ ಉತ್ಪನ್ನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ. ಸದ್ಯ ಸೊಸೈಟಿಯ ಕಾರ್ಯದರ್ಶಿಯಾಗಿರುವ ಉಮ್ಮಚ್ಗಿ ತೋಟಗಟ್ಟಾದ ಕಿರಣ ಗಣಪಾ ಸಿದ್ದಿ ಅವರು ಈ ಅವ್ಯವಹಾರವನ್ನು ಬಯಲಿಗೆಳೆದಿದ್ದಾರೆ.
ಈ ಸೊಸೈಟಿಯ ಅಧಿಕಾರ ಬಳಿಸಿಕೊಂಡ ರಾಮಚಂದ್ರ ಸಿದ್ದಿ ಅವರು 140015ರೂ ಹಣ ಅಪರಾತಪರ ಮಾಡಿದ್ದಾರೆ. ಜೊತೆಗೆ 693264 ರೂ ಮೌಲ್ಯದ ಕಿರು ಅರಣ್ಯ ಉತ್ಪನ್ನ ದುರುಪಯೋಗಪಡಿಸಿಕೊಂಡಿದ್ದಾರೆ. ಒಟ್ಟಾರೆಯಾಗಿ ರಾಮಚಂದ್ರ ಸಿದ್ದಿ ಅವರಿಂದ ಸೊಸೈಟಿಗೆ 833279ರೂ ನಷ್ಟವಾಗಿದೆ. ಸೊಸೈಟಿಗೆ ಮೋಸ ಮಾಡಿದ ರಾಮಚಂದ್ರ ಸಿದ್ದಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಕಿರಣ ಸಿದ್ದಿ ಅವರು ಆಗ್ರಹಿಸಿದ್ದಾರೆ. ಈ ಬಗ್ಗೆ ಅವರು ಪೊಲೀಸ್ ದೂರು ನೀಡಿದ್ದು, ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಶುರು ಮಾಡಿದ್ದಾರೆ.