ಕಾರವಾರದ ಸಂಕ್ರುಭಾಗ ಬಳಿ ಮಾರ್ಚ 9ರಂದು ನಡೆದ ಭೀಕರ ರಸ್ತೆ ಅಪಘಾತಕ್ಕೆ ಕಂಟೇನರ್ ಲಾರಿ ಚಾಲಕನ ಮಾದಕ ವಸ್ತು ಸೇವನೆಯೇ ಮುಖ್ಯ ಕಾರಣ ಎಂಬುದು ಪೊಲೀಸ್ ತನಿಖೆಯಿಂದ ದೃಢಪಟ್ಟಿದೆ.
ಆ ದಿನ ಗಾಂಜಾ ಮತ್ತು ಮದ್ಯದ ಅಮಲಿನಲ್ಲಿ ವಾಹನ ಚಲಾಯಿಸಿದ ಚಾಲಕನ ಬೇಜವಾಬ್ದಾರಿತನಕ್ಕೆ ಎಂಟು ವರ್ಷದ ಬಾಲಕ ಬಲಿಯಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದರು. ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ನಿವಾಸಿ ವಿಜಯಕುಮಾರ (28) ಎಂಬಾತ ತಾನು ಚಲಾಯಿಸುತ್ತಿದ್ದ ಲಾರಿಯನ್ನು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಭೀಕರ ಅಪಘಾತದಲ್ಲಿ ಮಹಾರಾಷ್ಟ್ರದ ಕೃಷಿ ನಗರದ ನಿವಾಸಿಗಳಾದ ಪ್ರಕಾಶ ವಾಘ್ ಅವರ ಎಂಟು ವರ್ಷದ ಪುತ್ರ ವಿಯಾನ ಪ್ರಕಾಶ ವಾಘ್ ಸ್ಥಳದಲ್ಲೇ ಮೃತಪಟ್ಟಿದ್ದರು. ಅಪಘಾತದ ತೀವ್ರತೆಗೆ ಬಾಲಕನ ತಂದೆ ಪ್ರಕಾಶ ವಾಘ್ (48), ತಾಯಿ ಅಮೃತ ವಾಘ್ (38) ಹಾಗೂ ಅಕ್ಕ ಭೂಮಿಕಾ (16) ಗಂಭೀರವಾಗಿ ಗಾಯಗೊಂಡಿದ್ದರು.
ಕಂಟೇನರ್ ಚಾಲಕನ ವೈದ್ಯಕೀಯ ವರದಿಯಲ್ಲಿ ಗಾಂಜಾ ಸೇವನೆ ದೃಢವಾಗಿದೆ. ಅಪಘಾತದ ಬಳಿಕ ಸಂಶಯದ ಮೇರೆಗೆ ಚಾಲಕ ವಿಜಯಕುಮಾರನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಚಾಲಕನ ರಕ್ತದ ಮಾದರಿಯನ್ನು ಪರೀಕ್ಷಿಸಿದಾಗ ಪಾಸಿಟಿವ್ ವರದಿ ಬಂದಿದೆ. ಅದರಿಂದ ಚಾಲಕ ಅಪಘಾತದ ಸಮಯದಲ್ಲಿ ಗಾಂಜಾ ಸೇವಿಸಿ ಅಮಲಿನಲ್ಲಿದ್ದ ಎಂಬುದು ಸಾಬೀತಾಗಿದೆ. ಇದರೊಂದಿಗೆ ಆತ ಮದ್ಯಪಾನ ಕೂಡ ಮಾಡಿರುವುದು ತನಿಖೆಯಲ್ಲಿ ಖಚಿತಪಟ್ಟಿದೆ.