ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿ ವಿಷಯದಲ್ಲಿ ಶಿರಸಿಯ ಲೋಹಿತ ಮಡಿವಾಳ ಹಾಗೂ ದರ್ಶನ ಗೌಡ ಅವರ ನಡುವೆ ವೈಮನಸ್ಸು ಮೂಡಿದೆ. ಈ ವಿಷಯ ತಾರಕ್ಕೇರಿದ್ದು, ಲೋಹಿತ ಮಡಿವಾಳ ಅವರು ತಮ್ಮ ಸಹಚರರ ಜೊತೆ ದರ್ಶನ ಗೌಡ ಅವರ ಮನೆಗೆ ನುಗ್ಗಿ ಗಲಾಟೆ ಮಾಡಿದ್ದಾರೆ. ಈ ವೇಳೆ ದರ್ಶನ್ ಗೌಡ ಅವರ ತಾಯಿಯ ಚೂಡಿದಾರ ಎಳೆದು, ಅದನ್ನು ಹರಿದಿದ್ದಾರೆ.
ಶಿರಸಿಯ ಶ್ರೀನಗರ ಇಂಡಸ್ಟಿಯಲ್ ಏರಿಯಾದಲ್ಲಿ ಸಂದ್ಯಾ ಗೌಡ ಅವರು ವಾಸವಾಗಿದ್ದಾರೆ. ಪಿಗ್ಮಿ ಕೆಲಕ್ಟರ್ ಆಗಿ ಅವರು ಜೀವನ ನಡೆಸುತ್ತಿದ್ದಾರೆ. ಸಂದ್ಯಾ ಗೌಡ ಅವರ ಮಗ ದರ್ಶನ ಗೌಡ ಅವರು ಬಚಗಾಂವಿನ ಲೋಹಿತ ಮಡಿವಾಳ ಅವರಿಗೆ ಸೆಕೆಂಡ್ ಹ್ಯಾಂಡ್ ಬೈಕ್ ಕೊಡಿಸಿದ್ದಾರೆ. ಆ ಬೈಕ್ ಹಾಳಾದ ಕಾರಣ ಲೋಹಿತ ಮಡಿವಾಳ ಅವರ ಜೊತೆ ಬಚಗಾಂವಿನ ಸಂತೋಷ ಗೌಡ ಹಾಗೂ ಸ್ವಸ್ತಿಕ್ ಮಡಿವಾಳ ಅವರು ಸಂದ್ಯಾ ಗೌಡ ಅವರ ಮನೆಗೆ ನುಗ್ಗಿ ರಂಪಾಟ ಮಾಡಿದ್ದಾರೆ.
ಮಾರ್ಚ 16ರ ರಾತ್ರಿ ಶ್ರೀ ನಗರ ಇಂಡಸ್ಟಿಯಲ್ ಏರಿಯಾಗೆ ಲೋಹಿತ ಮಡಿವಾಳ, ಸಂತೋಷ ಗೌಡ ಹಾಗೂ ಸ್ವಸ್ತಿಕ್ ಮಡಿವಾಳ ಅವರು ನುಗ್ಗಿದ್ದಾರೆ. ಅಲ್ಲಿದ್ದ ದರ್ಶನ್ ಗೌಡ ಅವರ ಕೈ ಹಿಡಿದು ಅವರೆಲ್ಲರೂ ಹೊಡೆದಿದ್ದಾರೆ. ಆಗ, ಸಂದ್ಯಾ ಗೌಡ ಅವರು ಅದನ್ನು ಪ್ರಶ್ನಿಸಿದ್ದು, `ಮಗನನ್ನು ಸರಿಯಾಗಿ ಬೆಳೆಸಲು ಆಗುವುದಿಲ್ಲ. ಎಂಥ ತಾಯಿ ನೀನು?’ ಎಂದು ಅವರೆಲ್ಲರೂ ಬೆದರಿಸಿದ್ದಾರೆ. ಈ ವೇಳೆ ಸ್ವಸ್ತಿಕ ಮಡಿವಾಳ ಅವರು ಸಂದ್ಯಾ ಗೌಡ ಅವರ ಚೂಡಿದಾರ ಹಿಡಿದು ಎಳೆದಿದ್ದಾರೆ. ಆಗ, ಚೂಡಿದಾರ ಹರಿದಿದ್ದು, ಆ ಮೂವರು ಸೇರಿ ತಾಯಿ-ಮಗನಿಗೆ ಬೆದರಿಕೆಯನ್ನು ಒಡ್ಡಿದ್ದಾರೆ.
ಈ ವಿಷಯದ ಬಗ್ಗೆ ಸಂದ್ಯಾ ಗೌಡ ಅವರು ಮಾಹಿತಿ ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಶಿರಸಿ ಗ್ರಾಮೀಣ ಠಾಣೆ ಪೊಲೀಸರಿಂದ ಆರೋಪಿತರ ವಿರುದ್ಧ ಕ್ರಮವಾಗಿದೆ.