ಕಾರವಾರದಲ್ಲಿ ಹಿಂದೂ ಹುಡುಗಿ ಫೋಟೋ ತೆಗೆದ ಮುಸ್ಲಿಂ ಯುವಕನಿಗೆ ಐದಾರು ಜನ ಸೇರಿ ಥಳಿಸಿದ್ದಾರೆ. ಆ ಮುಸ್ಲಿಂ ಯುವಕನ ಜೊತೆಗಿದ್ದ ಹಿಂದೂ ಹುಡುಗನಿಗೂ ಸಹ ಆ ಐದಾರು ಜನ ಬೆದರಿಕೆ ಒಡ್ಡಿ ಹಲ್ಲೆ ಮಾಡಿದ್ದಾರೆ.
ಕಾರವಾರದ ಅಲಿಗದ್ದಾದ ಎಸ್ ಬಿ ಐ ಬಳಿ ವಿನಯ ನಾಯ್ಕ (17) ಅವರು ವಾಸವಾಗಿದ್ದಾರೆ. ಕಾಲೇಜುವಿದ್ಯಾರ್ಥಿಯಾಗಿರುವ ಅವರು ಸದಾಶಿವಗಡ ಕಣಸಗೇರಿಯಲ್ಲಿರುವ ತಮ್ಮ ಸ್ನೇಹಿತ ಫರ್ದೀನ್ ಶೇಖ್ ಅವರ ಜೊತೆ ಸುತ್ತಾಟ ನಡೆಸಿದ್ದಾರೆ. ಮಾರ್ಚ 14ರ ಸಂಜೆ ವಿನಯ ನಾಯ್ಕ ಹಾಗೂ ಫರ್ದೀನ್ ಶೇಖ್ ಅವರು ಕಾರವಾರದ ಮಕ್ಕಳ ಗಾರ್ಡನ್ ಬಳಿ ಸುತ್ತಾಡುತ್ತಿರುವಾಗ ಅಲ್ಲಿ ಸಂಕ್ರಿವಾಡದ ರಾಘು ಮಾಧವ ನಾಯ್ಕ ಅವರು ಆಗಮಿಸಿದ್ದಾರೆ. ರಾಘು ನಾಯ್ಕ ಅವರ ಜೊತೆ ಮತ್ತೆ ಐದಾರು ಜನ ಇದ್ದು, ಅವರೆಲ್ಲರೂ ವಿನಯ ನಾಯ್ಕ ಅವರ ಬಳಿ ವಿವಿಧ ಪ್ರಶ್ನೆ ಕೇಳಿದ್ದಾರೆ.
ಆ ವೇಳೆ ವಿನಯ ನಾಯ್ಕ ಅವರು ತಮ್ಮ ಹೆಸರು ಹೇಳಿದ್ದು, ಜೊತೆಗಿದ್ದವರು ತಮ್ಮನ್ನು ಫರ್ದೀನ್ ಶೇಖ್ ಎಂದು ಪರಿಚಯಿಸಿಕೊಂಡಿದ್ದಾರೆ. ಆಗ, ಐದಾರು ಜನ ಸೇರಿ `ನೀವು ಯಾಕೆ ಹುಡುಗಿಯ ಫೋಟೋ ತೆಗೆದುಕೊಂಡಿದ್ದೀರಿ?’ ಎಂದು ಪ್ರಶ್ನೆ ಮಾಡಿದ್ದಾರೆ. `ಆ ಹುಡುಗಿ ನಿಮಗೇನು ಆಗಬೇಕು? ನೀವು ಲವ್ ಮಾಡುತ್ತಿರಾ?’ ಎಂದು ಕೇಳಿದ್ದಾರೆ. ಫರ್ದಿನ್ ಅವರು ಮುಸ್ಲಿಂ ಎಂದು ಅರಿತು ಅವರ ಮೇಲೆ ಹಲ್ಲೆ ಮಾಡಿದ್ದಾರೆ. `ಹಿಂದೂ ಹುಡುಗಿ ಹಾಳು ಮಾಡಲು ಬಂದಿದ್ದೀಯಾ?’ ನಿಂದಿಸಿ ಇನ್ನಷ್ಟು ಥಳಿಸಿದ್ದಾರೆ. ವಿನಯ ನಾಯ್ಕ ಅವರ ಕೈ ಹಿಡಿದು ಎಳೆದಿದ್ದು, ಅವರಿಗೂ ನೋವು ಮಾಡಿದ್ದಾರೆ.
ಅವರಿಬ್ಬರನ್ನು ಸುತ್ತುವರೆದ ಐದಾರು ಜನ ಜೀವ ಬೆದರಿಕೆಯನ್ನು ಸಹ ಒಡ್ಡಿದ್ದಾರೆ. ಈ ಬಗ್ಗೆ ವಿನಯ ನಾಯ್ಕ ಅವರು ಕಾರವಾರ ಪೊಲೀಸರಿಗೆ ದೂರು ನೀಡಿದ್ದಾರೆ. `ರಾಘು ನಾಯ್ಕ ಅವರನ್ನು ತಾನು ಪರಿಚಯಿಸಿದ್ದು, ಉಳಿದ ಐದಾರು ಜನರನ್ನು ಗುರುತಿಸಬಲ್ಲೆ’ ಎಂದು ವಿನಯ ನಾಯ್ಕ ಅವರು ಹೇಳಿದ್ದಾರೆ. ಪ್ರಕರಣ ದಾಖಲಿಸಿದ ಪೊಲೀಸರು ಕಾನೂನು ಕ್ರಮ ಜರುಗಿಸಿದ್ದಾರೆ.