ಮಾರ್ಚ 20ರಿಂದ 27ರವರೆಗೆ ಧರ್ಮಸ್ಥಳ ಉಜಿರೆಯ ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಶ್ರೀರಾಮ ಭಗವಾನ್ ನಿತ್ಯಾನಂದ ಮಂದಿರದಲ್ಲಿ 66ನೇ ವರ್ಷದ ಶ್ರೀರಾಮ ನಾಮ ಸಪ್ತಾಹ ನಡೆಯಲಿದೆ. ಶ್ರೀರಾಮ ಕ್ಷೇತ್ರ ಮಹಾಸಂಸ್ಥಾನದ ಪ್ರತಿಷ್ಠಾ ಜಾತ್ರಾ ಮಹೋತ್ಸವ ಮತ್ತು ಮಹಾ ಬ್ರಹ್ಮರಥೋತ್ಸವವೂ ಈ ಅವಧಿಯಲ್ಲಿ ಅದ್ಧೂರಿಯಾಗಿ ಜರುಗಲಿದೆ.
ಶಿರಸಿಯ ಸುಪ್ರಿಯಾ ಇಂಟರ್ ನ್ಯಾಶನಲ್ ಭವನದಲ್ಲಿ ಶ್ರೀರಾಮ ಕ್ಷೇತ್ರ ಸೇವಾ ಸಮಿತಿಯ ಶಿರಸಿ ವಿಭಾಗೀಯ ಅಧ್ಯಕ್ಷ ವೆಂಕಟೇಶ ನಾಯ್ಕ ಅವರು ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ್ದು, ಸರ್ವರನ್ನು ಈ ಕಾರ್ಯಕ್ರಮಕ್ಕೆ ಸ್ವಾಗತಿಸಿದ್ದಾರೆ. `ಶ್ರೀ ಆತ್ಮಾನಂದ ಸರಸ್ವತೀ ಸ್ವಾಮೀಜಿ ದಿವ್ಯ ಸ್ಮರಣೆಯೊಂದಿಗೆ ಬ್ರಹ್ಮಾನಂದ ಸ್ವಾಮೀಜಿ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ’ ಎಂದವರು ಮಾಹಿತಿ ನೀಡಿದ್ದಾರೆ. `ಮಾರ್ಚ 20ರಂದು ಬೆಳಿಗ್ಗೆ 9.30ಕ್ಕೆ 66ನೇ ವರ್ಷದ ಶ್ರೀರಾಮ ತಾರಕ ಮಂತ್ರ ಸಪ್ತಾಹ ಹಾಗೂ ಜಾತ್ರೋತ್ಸವ ಉದ್ಘಾಟನೆ ನಡೆಯಲಿದೆ. ಅದೇ ದಿನ ಸಿದ್ಧಿವಿನಾಯಕ ಹಾಗೂ ಕ್ಷೇತ್ರಪಾಲ ಗಣಪತಿ ದೇವರ ಬಲಿ ಉತ್ಸವ, ಮಾರ್ಚ 21ರಂದು ರಾತ್ರಿ 8 ಗಂಟೆಯಿoದ ಶ್ರೀ ನಿತ್ಯಾನಂದ ಸ್ವಾಮೀಜಿ, ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಶಿರಡಿ ಸಾಯಿ ಬಾಬಾ ಅವರ ಉತ್ಸವಮೂರ್ತಿಗಳ ಉತ್ಸವ, ಮಾರ್ಚ 22ರಂದು ರಾತ್ರಿ 8ಕ್ಕೆ ಶ್ರೀರಾಮದೇವರ ರಜತ ಪಲ್ಲಕ್ಕಿ ಉತ್ಸವ ನಡೆಯಲಿದೆ’ ಎಂದವರು ಹೇಳಿದ್ದಾರೆ.
`ಮಾರ್ಚ 23ರಂದು ರಾತ್ರಿ 8ಕ್ಕೆ ಅನ್ನಪೂರ್ಣೇಶ್ವರಿ ದೇವಿಯ ಉತ್ಸವ ಹಾಗೂ ಪುಷ್ಪ ರಥೋತ್ಸವ, ಮಾರ್ಚ 24ರಂದು ರಾತ್ರಿ 8ಕ್ಕೆ ದುರ್ಗಾಪರಮೇಶ್ವರಿ ದೇವಿಯ ಮೂರ್ತಿ ಉತ್ಸವ ಹಾಗೂ ಚಂದ್ರಮoಡಲ ರಥೋತ್ಸವ, ಮಾರ್ಚ 25ರಂದು ರಾತ್ರಿ 8ಕ್ಕೆ ಶ್ರೀ ಗೋಪಾಲಕೃಷ್ಣ ದೇವರ ಉತ್ಸವ ಹಾಗೂ ಬೆಳ್ಳಿ ರಥೋತ್ಸವ, ಮಾರ್ಚ 26ರಂದು ರಾತ್ರಿ 8ಕ್ಕೆ ದತ್ತಾತ್ರೇಯ ಹಾಗೂ ಆಂಜನೇಯ ದೇವರ ಮೂರ್ತಿ ಉತ್ಸವ ಮತ್ತು ಹನುಮಾನ್ ರಥೋತ್ಸವ, ಮಾರ್ಚ 27ರಂದು ಬೆಳಿಗ್ಗೆ 9.30ರಿಂದ ಶ್ರೀರಾಮ ತಾರಕ ಮಂತ್ರ ಯಜ್ಞ ಮಂಗಳ ಕಾರ್ಯಕ್ರಮ, ಮಧ್ಯಾಹ್ನ ದೇವರ ಪಾಲಕಿ ಉತ್ಸವ ಹಾಗೂ ರಾತ್ರಿ 7ರಿಂದ ಕ್ಷೇತ್ರದ ರಕ್ತೇಶ್ವರಿ ಮತ್ತು ಗುಳಿಗ ದೈವಗಳಿಗೆ ನೇಮೋತ್ಸವ, ರಾತ್ರಿ 10ಕ್ಕೆ ಮಹಾ ಬ್ರಹ್ಮರಥೋತ್ಸವ, ಮಾರ್ಚ 29ರಂದು ಆದಿ ಪಜಿರಡ್ಕ ದೇವಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಹಾಗೂ ರಾತ್ರಿ 8ರಿಂದ ಸನ್ಯಾಸಿ ಪಂಜುರ್ಲಿ ಮತ್ತು ಕಲ್ಲುರ್ಟಿ-ಪಂಜುರ್ಲಿ ನೇಮೋತ್ಸವ ನಡೆಯಲಿದೆ’ ಎಂದವರು ಕಾರ್ಯಕ್ರಮಗಳ ವಿವರ ನೀಡಿದ್ದಾರೆ.
`ಶ್ರೀರಾಮ ಕ್ಷೇತ್ರವು ವಿದೇಶಗಳಲ್ಲಿಯೂ ಶಾಖಾ ಮಠಗಳನ್ನು ಸ್ಥಾಪಿಸಿ ಸನಾತನ ಸಂಸ್ಕೃತಿಯ ಪರಂಪರೆಯನ್ನು ವಿಸ್ತರಿಸುವ ಕಾರ್ಯ ಮಾಡುತ್ತಿದೆ. 2028ರಲ್ಲಿ ನಾಸಿಕ್‌ನಲ್ಲಿ ನಡೆಯುವ ಮಹಾಕುಂಭಮೇಳದಲ್ಲಿ ಬ್ರಹ್ಮಾನಂದ ಸ್ವಾಮೀಜಿ ನೇತೃತ್ವದಲ್ಲಿ ಕಾರ್ಯಕ್ರಮಗಳು ನಡೆಯಲಿವೆ. ಮಹಾಸಂಸ್ಥಾನದಲ್ಲಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು’ ಎಂದವರು ಮನವಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಆರ್ಯ ಈಡಿಗ, ನಾಮಧಾರಿ ಹಾಗೂ ಬಿಲ್ಲವ ಸಂಘದ ನಗರಾಧ್ಯಕ್ಷ ಗಣಪತಿ ನಾಯ್ಕ ದೇವಿಕೆರೆ, ನಗರಸಭೆಯ ಮಾಜಿ ಅಧ್ಯಕ್ಷ ಗಣಪತಿ ನಾಯ್ಕ, ನಗರಭೆ ಮಾಜಿ ಸದಸ್ಯ ಮಧುಕರ ಬಿಲ್ಲವ, ಪ್ರಮುಖರಾದ ಶ್ರೀನಿವಾಸ ನಾಯ್ಕ, ಅನಂತ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಸೇವಾ ಕಾರ್ಯಕರ್ತರಾಗಿ ಹೆಸರು ನೊಂದಾಯಿಸಿರುವವರು ಇಷ್ಟ ದೇವತೆಯ ಪೂಜೆ ನಡೆಸಲು ಇಲ್ಲಿ ಫೋನ್ ಮಾಡಿ: 9481514801