ಕಳೆದ 25 ವರ್ಷಗಳಿಂದ ಅಂಕೋಲಾ ಅವರ್ಸಾದ ಭೂ ದೇವಿ ಆಟೋ ರಿಕ್ಷಾ ಸಂಘದವರು ಅದ್ಧೂರಿಯಾಗಿ ಯುಗಾದಿ ಉತ್ಸವ ಆಚರಿಸುತ್ತ ಬಂದಿದ್ದಾರೆ. ಇಲ್ಲಿನ ರಿಕ್ಷಾ ಚಾಲಕರು ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಯ ಜೊತೆ ಸಾಮಾಜಿಕ ಜಾಗೃತಿ ಹಾಗೂ ಸಂಸ್ಕೃತಿ-ಪರ0ಪರೆ ಉಳಿಸುವ ಸಂದೇಶ ನೀಡುತ್ತಿದ್ದಾರೆ.
ಈ ಬಾರಿಯೂ ರಿಕ್ಷಾ ಸಂಘದವರು ಭಕ್ತಿಭಾವದಿಂದ ಯುಗಾದಿ ಹಬ್ಬ ಆಚರಿಸಿದ್ದು, ಅವರು ನೀಡಿದ ಸಾಮಾಜಿಕ ಸಂದೇಶಗಳು ಜನರ ಮನಸ್ಸು ತಲುಪಿವೆ. ಗುರುವಾರ ಅವರ್ಸಾದ ಶ್ರೀ ಭೂದೇವಿ ಆಟೋ ರಿಕ್ಷಾ ನಿಲ್ದಾಣದಲ್ಲಿ ನಡೆದ ಕಾರ್ಯಕ್ರಮ, ಗ್ರಾಮೀಣ ಸಾಂಸ್ಕೃತಿಕ ಬದುಕಿನ ಪ್ರತಿಬಿಂಬವಾಗಿ ಗೋಚರಿಸಿದೆ. ಯೂನಿಯನ್ ಅಧ್ಯಕ್ಷ ರಾಜೇಶ್ ಈರಾ ನಾಯ್ಕ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಿಡಬ್ಲ್ಯೂಡಿ ಲೆಕ್ಕ ಪರಿಶೋಧಕ ರಾಜೇಶ್ ರಾಮನಾಥನ್ ಅವರು ದೇವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ಅವರು ರಿಕ್ಷಾ ರ‍್ಯಾಲಿಗೆ ಚಾಲನೆ ನೀಡಿದರು. `ಸನಾತನ ಹಿಂದೂ ಧರ್ಮದ ಜಾಗೃತಿ’ ಎಂಬ ಸಂದೇಶ ಹೊತ್ತು ಆ ರ‍್ಯಾಲಿ ಗ್ರಾಮದ ಎಲ್ಲಡೆ ಸಂಚರಿಸಿತು.
ಅವರ್ಸಾದ ಪ್ರಮುಖ ದೇವಸ್ಥಾನಗಳಾದ ಶ್ರೀ ಭೂದೇವಿ ಮತ್ತು ಶ್ರೀ ಕಾತ್ಯಾಯನಿ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ರಿಕ್ಷಾ ಚಾಲಕರು ಭೇಟಿ ನೀಡಿದರು. ರ‍್ಯಾಲಿಯ ಮೂಲಕ ಒಗ್ಗಟ್ಟಿನಿಂದ ತೆರಳಿದ ಅವರು ದೇವಿ ದರ್ಶನಪಡೆದರು. ನಂತರ ಪಟಾಕಿ ಸಿಡಿಸಿ ಸಾರ್ವಜನಿಕರಿಗೆ ಸಿಹಿ ಹಂಚುವ ಮೂಲಕ ಹಬ್ಬ ಆಚರಿಸಿದರು. ದಿನನಿತ್ಯ ಅಲ್ಪ ಆದಾಯದಲ್ಲಿ ಜೀವನ ಸಾಗಿಸುವ ಆಟೋ ಚಾಲಕರು, ತಮ್ಮ ಕೆಲಸದ ನಡುವೆಯೇ ಸಮಾಜ ಸೇವೆಗೆ ಮುಂದಾಗಿರುವುದು ವಿಶೇಷ ಎನಿಸಿತು. ಇಲ್ಲಿನ ರಕ್ಷಾ ಚಾಲಕರು ಯುಗಾದಿ ಮಾತ್ರವಲ್ಲದೆ, ಸ್ವಾತಂತ್ರ‍್ಯೋತ್ಸವ, ಗಣರಾಜ್ಯೋತ್ಸವ ಹಾಗೂ ಸ್ಥಳೀಯ ಹಬ್ಬ-ಕಾರ್ಯಕ್ರಮಗಳಲ್ಲಿ ಸಿಹಿ ಹಂಚುವ ಮೂಲಕ ಜನರಲ್ಲಿ ಒಗ್ಗಟ್ಟು ಮತ್ತು ಹಬ್ಬದ ಅರಿವು ಮೂಡಿಸುತ್ತಿದ್ದಾರೆ.
ಶ್ರೀ ಭೂದೇವಿ ಆಟೋ ಯೂನಿಯನ್ ಕೇವಲ ಸಾರಿಗೆ ಸೇವೆಗೆ ಸೀಮಿತವಾಗಿಲ್ಲ. ಗ್ರಾಮದಲ್ಲಿ ನಡೆಯುವ ವಿವಿಧ ಕಾರ್ಯಕ್ರಮಗಳಿಗೆ ಸಹಕಾರ ನೀಡುವುದು, ಅಗತ್ಯವಿರುವ ಸಂದರ್ಭದಲ್ಲಿ ನೆರವು ನೀಡುವುದು, ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದೆ. ಇದು ಗ್ರಾಮೀಣ ಮಟ್ಟದಲ್ಲಿ ಸಂಘಟಿತ ಶಕ್ತಿಯ ಉದಾಹರಣೆಯಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪಿಡಿಓ ನಾಗೇಂದ್ರ ನಾಯ್ಕ ಅವರು ಯೂನಿಯನ್‌ನ ಸೇವಾ ಮನೋಭಾವವನ್ನು ಪ್ರಶಂಸಿಸಿ, `ಹಬ್ಬಗಳ ಮೂಲಕ ಸಮಾಜದಲ್ಲಿ ಒಗ್ಗಟ್ಟು ಮತ್ತು ಸಂಸ್ಕೃತಿ ಉಳಿಸುವ ಕಾರ್ಯ ಶ್ಲಾಘನೀಯ’ ಎಂದು ಹೇಳಿದರು. `ಶ್ರೀ ಭೂದೇವಿ ಆಟೋ ರಿಕ್ಷಾ ಯೂನಿಯನ್‌ನ ಯುಗಾದಿ ಆಚರಣೆ ಕೇವಲ ಹಬ್ಬದ ಉತ್ಸವವಲ್ಲ. ಅದು ಸಾಮಾಜಿಕ ಒಗ್ಗಟ್ಟು, ಧಾರ್ಮಿಕ ಜಾಗೃತಿ ಮತ್ತು ಸೇವಾ ಮನೋಭಾವದ ಸಮನ್ವಯವಾಗಿದ್ದು, ಇತರ ಸಂಘಟನೆಗಳಿಗೆ ಮಾದರಿಯಾಗಿದೆ’ ಎಂದು ಆ ಭಾಗದ ಜನ ಹೆಮ್ಮೆಯಿಂದ ಮಾತನಾಡಿದರು.
`ಯುಗಾದಿ ಕೇವಲ ಹಬ್ಬವಲ್ಲ. ನಮ್ಮ ಸಂಸ್ಕೃತಿ-ಜಾಗೃತಿಯ ಸಂದೇಶ. 25ಕ್ಕೂ ಅಧಿಕ ವರ್ಷಗಳಿಂದ ನಮ್ಮ ಯೂನಿಯನ್ ಈ ಪರಂಪರೆಯನ್ನು ಮುಂದುವರೆಸಿ ಸಮಾಜ ಸೇವೆಗೆ ಬದ್ಧವಾಗಿದೆ’

ರಾಜೇಶ್ ಈರಾ ನಾಯ್ಕ, ಅಧ್ಯಕ್ಷರು
ಶ್ರೀ ಭೂದೇವಿ ಆಟೋ ರಿಕ್ಷಾ ಯೂನಿಯನ್, ಅವರ್ಸಾ