ಮನೆ ಬಳಕೆಗೆ ನೀಡಿದ ಸಿಲೆಂಡರ್’ನ್ನು ಹೊಟೇಲಿನಲ್ಲಿ ಬಳಕೆ ಮಾಡಿದವರಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ದಾಂಡೇಲಿ ನಗರ ಸುತ್ತಾಟ ನಡೆಸಿದ ಅಧಿಕಾರಿಗಳು ಐದು ಕಡೆ ದಾಳಿ ನಡೆಸಿ, ಸಿಲೆಂಡರ್ ಜಪ್ತು ಮಾಡಿದ್ದಾರೆ.
ವಿವಿಧ ಹೊಟೇಲ್, ಚಹ ಅಂಗಡಿ ಹಾಗೂ ಎಗ್ ರೈಸ್ ಮಳಿಗೆಗಳ ಮೇಲೆ ಅಧಿಕಾರಿಗಳು ದಿಢೀರ್ ದಾಳಿ ಮಾಡಿದರು. ಐದು ಕಡೆ ದಾಳಿ ಮಾಡಿದಾಗ ಐದು ಗೃಹ ಬಳಕೆ ಸಿಲೆಂಡರ್ ಕಾಣಿಸಿದ್ದು, ಅದನ್ನು ವಶಕ್ಕೆಪಡೆದರು. `ವಾಣಿಜ್ಯ ಉದ್ದೇಶಕ್ಕೆ ಗೃಹ ಬಳಕೆ ಸಿಲೆಂಡರ್ ಬಳಸುವುದು ತಪ್ಪು’ ಎಂದು ವ್ಯಾಪಾರಿಗಳಿಗೆ ಅವರು ಅರಿವು ಮೂಡಿಸಿದರು. ತಹಶೀಲ್ದಾರ ಶೈಲೇಶ್ ಪ್ರಮಾಣಂದ್ ಅವರು ಮಾತನಾಡಿ `ಇನ್ನಷ್ಟು ಕಡೆ ದಾಳಿ ಮುಂದುವರೆಯಲಿದೆ. ತಪ್ಪು ಮಾಡಿದ ಯಾರನ್ನು ಬಿಡುವುದಿಲ್ಲ’ ಎಂದು ಎಚ್ಚರಿಸಿದರು.
ಆಹಾರ ನಿರೀಕ್ಷಕ ಗೋಪಿ ಚೌಹಾನ್ ಅವರು ಮಾತನಾಡಿ `ಸಿಲೆಂಡರ್ ಕೊರತೆ ತಾತ್ಕಾಲಿಕವಾಗಿದ್ದು, ಹೊಟೇಲ್ ಮಾಲಕರು ಗೃಹ ಬಳಕೆ ಸಿಲೆಂಡರ್ ಬಳಸುವುದು ಅಪರಾಧ’ ಎಂದು ವಿವರಿಸಿದರು. `ಅಂಥ ದುರುಪಯೋಗದಿಂದಲೇ ಸಾರ್ವಜನಿಕರಿಗೆ ಸಿಲೆಂಡರ್ ಕೊರತೆಯಾಗುವ ಸಾಧ್ಯತೆಗಳಿವೆ’ ಎಂದು ತಿಳಿಸಿದರು. ಈ ಕಾರ್ಯಾಚರಣೆಯಲ್ಲಿ ಗೋಪಿ ಚೌಹಾನ್ ಹಾಗೂ ದಯಾನಂದ್ ಭಾಗವಹಿಸಿದ್ದರು.