ಹೊನ್ನಾವರ – ಕುಮಟಾ ರಾಷ್ಟ್ರೀಯ ಹೆದ್ದಾರಿಯ ಏಕಮುಖ ಸಂಚಾರ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿದ ವೆಂಕಟೇಶ ವ್ಯದ್ಯ ಅವರ ಪ್ರಾಣಕ್ಕೆ ಸಂಚಕಾರ ಎದುರಾಗಿದೆ. ಹೆಲ್ಮೆಟ್ ಸಹ ಧರಿಸದೇ ಬೈಕ್ ಓಡಿಸಿದ ಅವರಿಗೆ ಬಸ್ಸು ಗುದ್ದಿದ್ದು, ವೆಂಕಟೇಶ ವೈದ್ಯ ಅವರು ಸಾವನಪ್ಪಿದ್ದಾರೆ.
ಹೊನ್ನಾವರ ಚಿಪ್ಪಿಹಕ್ಕಲ ಬಳಿಯ ನವಿಲಗೋಣ ಬಳಿ ವೆಂಕಟೇಶ ಗೋಪಾಲಕೃಷ್ಣ ವೈದ್ಯ (38) ಅವರು ವಾಸವಾಗಿದ್ದರು. ಅಲ್ಲಿ-ಇಲ್ಲಿ ಅಡುಗೆ ಕೆಲಸ ಮಾಡಿಕೊಂಡು ಅವರು ಜೀವನ ನಡೆಸುತ್ತಿದ್ದರು. ಮಾರ್ಚ 19ರ ರಾತ್ರಿ 8.20ಕ್ಕೆ ವೆಂಕಟೇಶ ವೈದ್ಯ ಅವರು ಹೊನ್ನಾವರ-ಕುಮಟಾ ಹೆದ್ದಾರಿಯಲ್ಲಿ ಬೈಕ್ ಓಡಿಸುತ್ತಿದ್ದರು. ಆ ರಾತ್ರಿ ಕುಮಟಾದಿಂದ ಹೊನ್ನಾವರದ ಕಡೆ ಅವರು ವೇಗವಾಗಿ ಬೈಕ್ ಓಡಿಸುತ್ತಿದ್ದರು. ಏಕಮುಖ ಸಂಚಾರ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಅವರು ಬೈಕ್ ಚಲಾಯಿಸಿದ್ದು, ಎದುರಿನಿಂದ ಬಂದ ಬಸ್ಸು ಅವರಿಗೆ ಡಿಕ್ಕಿ ಹೊಡೆಯಿತು.
ಹೊನ್ನಾವರ ತಾಲೂಕಿನ ಅಗ್ರಹಾರ ಹೆದ್ದಾರಿ 66ರಲ್ಲಿ ಈ ಅಪಘಾತ ನಡೆದಿದ್ದು, ಗಾಯಗೊಂಡ ವೆಂಕಟೇಶ ವೈದ್ಯ ಅವರನ್ನು ಹೊನ್ನಾವರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ವೆಂಕಟೇಶ್ ವೈದ್ಯ ಅವರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಗಿತ್ತು. ವೆಂಕಟೇಶ್ ವೈದ್ಯ ಅವರು ತಲೆಗೆ ಹೆಲ್ಮೆಟ್ ಧರಿಸಿದ್ದರೆ ಅವರು ಬದುಕುವ ಸಾಧ್ಯತೆಯಿತ್ತು. ಆದರೆ, ಸುರಕ್ಷತಾ ಕಾನೂನನ್ನು ಅವರು ಸಂಪೂರ್ಣವಾಗಿ ನಿರ್ಲಕ್ಷಿಸಿದ ಪರಿಣಾಮ ಸಾವನಪ್ಪಿದರು. ಈ ಅಪಘಾತದ ಬಗ್ಗೆ ಬಸ್ ಚಾಲಕ ಬಸಪ್ಪ ದ್ಯಾಪುರ ಮಾಹಿತಿ ನೀಡಿದರು. ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿದರು. ಆಸ್ಪತ್ರೆಯವರು ಶವ ಪರೀಕ್ಷೆ ನಡೆಸಿ, ಕುಟುಂಬದವರಿಗೆ ಶವ ಹಸ್ತಾಂತರ ಮಾಡಿದರು.
`ಸಂಚಾರಿ ನಿಯಮವನ್ನು ತಪ್ಪದೇ ಪಾಲಿಸಿ’