ಬನವಾಸಿ ಬಳಿಯ ಶಿವರಾಜ ಚೆನ್ನಯ್ಯ ಹಾಗೂ ಮಾಬುಬಲಿ ಖಾನ್ ನಡುವೆ ವೈಮನಸ್ಸು ಮೂಡಿದ್ದು, ಅವರಿಬ್ಬರು ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಟ ನಡೆಸಿದ್ದಾರೆ. ಪೊಲೀಸರು ಬಂದು ಹೊಡೆದಾಟ ತಪ್ಪಿಸುವ ಪ್ರಯತ್ನ ಮಾಡಿದರೂ ಪ್ರಯೋಜನವಾಗಿಲ್ಲ.
ಶಿರಸಿ ತಾಲೂಕಿನ ಬನವಾಸಿ ಅಂಡಗಿ ಬಳಿ ಶಿವರಾಜ ಚೆನ್ನಯ್ಯ (33) ಅವರು ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದಾರೆ. ಅಂಡಗಿಯ ಹೆಬ್ಬತ್ತಿ ಸುತ್ತಲಿನ ಪ್ರದೇಶದಲ್ಲಿ ಮಾಬುಬಲಿ ಹಬೀಬ್‌ಖಾನ್ (24) ಅವರು ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಅವರಿಬ್ಬರ ನಡುವೆ ದ್ವೇಷ ಶುರುವಾಗಿದ್ದು, ಅದೇ ದ್ವೇಷ ಹೊಡೆದಾಟಕ್ಕೆ ಕಾರಣವಾಗಿದೆ.
ಮಾರ್ಚ 18ರ ಸಂಜೆ ಹೆಬ್ಬತ್ತಿ ಗ್ರಾಮದ ಸಯ್ಯದ್ ಹುಸೆನ್ ಅವರ ಮನೆ ಮುಂದೆ ಅವರಿಬ್ಬರು ಹೊಡೆ-ಬಡೆ ಮಾಡಿದ್ದಾರೆ. ಈ ವೇಳೆ ಬನವಾಸಿ ಪೊಲೀಸ್ ಠಾಣೆಯ ಸಿಬ್ಬಂದಿ ಮಾಲತೇಶ ಮುನ್ನಂಗಿ ಅವರು ಅಲ್ಲಿಗೆ ಹೋಗಿದ್ದು, ಹೊಡೆದಾಟ ಬಿಡಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಪೊಲೀಸರ ಮಾತು ಕೇಳದೇ ಅವರಿಬ್ಬರು ಹೊಡೆದಾಡಿಕೊಂಡಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಶಾಂತಿ ಭಂಗವಾಗುವ ನಿಟ್ಟಿನಲ್ಲಿ ಹೊಡೆದಾಟ ನಡೆಸಿದ ಕಾರಣ ಪೊಲೀಸರು ಅವರಿಬ್ಬರ ವಿರುದ್ಧವೂ ಸುಮೋಟೋ ಕೇಸು ದಾಖಲಿಸಿದ್ದಾರೆ.