ಕೊಲ್ಲುವ ಉದ್ದೇಶದಿಂದ ಕಸಾಯಿಖಾನೆಗೆ ಹೋಗಿದ್ದ ಜಾನುವಾರುಗಳಿಗೆ ಭಟ್ಕಳ ಪೊಲೀಸರು ಮರುಜನ್ಮ ನೀಡಿದ್ದಾರೆ. ಗುರುವಾರ 9 ಜಾನುವಾರುಗಳನ್ನು ರಕ್ಷಿಸಿದ್ದ ಪೊಲೀಸರು ಶುಕ್ರವಾರವೂ ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದು, ಈ ದಿನ ಮತ್ತೆ 14 ಹಸುಗಳ ಜೀವ ಕಾಪಾಡಿದ್ದಾರೆ.
ಗುರುವಾರ ಲಕ್ಷ ರೂ ಬೆಲೆಯ ದೈತ್ರ ಗಾತ್ರದ ಜಾನುವಾರುಗಳನ್ನು ಭಟ್ಕಳದ ಜಾಗಟೆಬಾಲಿನ ಮ್ಯಾಂಗೋ ಫಾರ್ಮ ಬಳಿ ಮಸಿದಿಕ್ ಅಬ್ದುಲ್ ರೆಹಮಾನ್ ಅವರು ಕೂಡಿ ಹಾಕಿದ್ದರು. ಭಟ್ಕಳ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ವೆಂಕಟೇಶ್ ಮುರನಾಳ ಅವರು ಅಲ್ಲಿ ದಾಳಿ ಮಾಡಿದ್ದು, ಆ ಜಾನುವಾರುಗಳಿಗೆ ಬಿಡುಗಡೆ ಭಾಗ್ಯ ಕರುಣಿಸಿದರು. 9 ಲಕ್ಷ ರೂ ಮೌಲ್ಯದ 9 ಜಾನುವಾರುಗಳಿಗೆ ಅವರು ಆರೈಕೆ ಮಾಡಿದರು. ಜೊತೆಗೆ ವಧೆ ಮಾಡುವ ಉದ್ದೇಶದಿಂದ ಜಾನುವಾರುಗಳನ್ನು ಬಂಧಿಸಿದ್ದ ಅಬ್ದುಲ್ ರೆಹಮಾನ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದರು.
ಶುಕ್ರವಾರ ಹಾವೇರಿಯ ಹಜರತ್ ಅಲಿ ತಹಶೀಲ್ದಾರ್ ಹಾಗೂ ಕಲಘಟಕಿಯ ಮಹಮದ್ ಆಸೀಫ್ ರುಸ್ತುಂ ಸಾಬ್ ಸೇರಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದರು. ಶಿರಾಲಿಯಿಂದ ಭಟ್ಕಳದ ಕಡೆ ಬರುತ್ತಿದ್ದ ಲಾರಿಯನ್ನು ಪಿಸೈ ಮಲ್ಲಿಖಾರ್ಜುನ ಕೋರಾಣಿ ಅವರು ತಪಾಸಣೆಗೆ ಒಳಪಡಿಸಿದರು. ಆಗ, ಅಲ್ಲಿ 14 ಲಕ್ಷ ರೂ ಮೌಲ್ಯದ ಜಾನುವಾರುಗಳು ಕಾಣಿಸಿದವು. 14 ಜಾನುವಾರುಗಳಿಗೆ ಹುಲ್ಲು ನೀರು ಕೊಡದೇ ಸಾಗಾಟ ಮಾಡುತ್ತಿರುವುದು ಗಮನಕ್ಕೆ ಬಂದಿತು. ಈ ವೇಳೆ ಮುಖ್ಯ ಆರೋಪಿ ಹಜರತ್ ಅಲಿ ಓಡಿ ಪರಾರಿಯಾಗಿದ್ದು, ಮಹಮದ್ ಆಸೀಪ್ ಸಿಕ್ಕಿಬಿದ್ದರು. ಅವರಿಬ್ಬರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸಿದರು.