ಉತ್ತರ ಕನ್ನಡ ಜಿಲ್ಲೆಯ ನದಿ ತಿರುವು ಯೋಜನೆ ವಿಷಯ ಇದೀಗ ಯುನೆಸ್ಕೋ ಮಟ್ಟದವರೆಗೆ ತಲುಪಿದೆ. ವಿಶ್ವ ಪರಂಪರೆಯ ಸಮಾವೇಶದ ಮಾರ್ಗಸೂಚಿಗಳ ನಿಬಂಧನೆಗಳಿಗೆ ಅನುಸಾರವಾಗಿ ಮುಂದಿನ ಕ್ರಮ ಜರುಗಿಸುವಂತೆ ಭಾರತ ಸರ್ಕಾರಕ್ಕೆ ಯುನೆಸ್ಕೋ ಲಿಖಿತ ಸೂಚನೆ ನೀಡಿದೆ.
ನದಿ ತಿರುವು ಯೋಜನೆ ವಿಷಯವಾಗಿ ಶಿರಸಿಯ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಯುನೆಸ್ಕೋದ ವಿಶ್ವ ಪರಂಪರೆಯ ಕೇಂದ್ರಕ್ಕೆ ಪತ್ರ ಬರೆದಿದ್ದರು. ಫೆಬ್ರವರಿ 17ರಂದು ಬರೆದ ಪತ್ರವನ್ನು ಯುನೆಸ್ಕೋ ಗಮನಿಸಿದ್ದು, ವಿಶ್ವ ಪರಂಪರೆಯ ಕೇಂದ್ರ ಕಾರ್ಯದರ್ಶಿ ಇದಕ್ಕೆ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಭಾರತ ಸರ್ಕಾರಕ್ಕೂ ಅವರು ವಿವಿಧ ಸೂಚನೆ ನೀಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕೇಂದ್ರ ನೀರಾವರಿ ಅಭಿವೃದ್ದಿ ಪ್ರಾಧೀಕಾರವೂ ಅಘನಾಶಿನಿ ವೇದಾವತಿ ನದಿ ಜೋಡಣೆ ಯೋಜನೆಗೆ ಪ್ರಾಥಮಿಕ ಕಾರ್ಯಸಾಧ್ಯತಾ ವರದಿಯ ಬಗ್ಗೆ ರವೀಂದ್ರ ನಾಯ್ಕ ಅವರು ಪತ್ರದಲ್ಲಿ ಉಲ್ಲೇಖಿಸಿದ್ದು, ಜನಾಂದೋಲನ ವಿಷಯವನ್ನು ಪ್ರಸ್ತಾಪಿಸಿದ್ದರು.
25 ಸಾವಿರಕ್ಕೂ ಅಧಿಕ ಜನ ನದಿ ಜೋಡಣೆ ವಿರೋಧಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಆಕ್ಷೇಪ ಪತ್ರ ಸಲ್ಲಿಸಿರುವುದನ್ನು ಪತ್ರದ ಮೂಲಕ ತಿಳಿಸಲಾಗಿತ್ತು. ಯುನೆಸ್ಕೋ ವಿಶ್ವ ಪರಂಪರೆ ಕೇಂದ್ರಕ್ಕೂ ಕಾನೂನಾತ್ಮಕ, ನೈಸರ್ಗಿಕ, ಬೌಗೋಳಿಕ ಪರಿಸರ ಸೂಕ್ಷ ಪ್ರದೇಶ ಪಶ್ಚಿಮ ಘಟ್ಟದಲ್ಲಿನ ಪರಿಸರ ಮೌಲ್ಯತೆ ಅಂಶಗಳ ಬಗ್ಗೆ ಗಮನಹರಿಸಲಾಗಿತ್ತು. ಈ ಪತ್ರ ಗಮನಿಸಿದ ಯುನೆಸ್ಕೋ `ಪಶ್ಚಿಮ ಘಟ್ಟಗಳ ರಕ್ಷಣೆ, ಸಂರಕ್ಷಣೆಯಲ್ಲಿ ಸಂಬAಧಪಟ್ಟ ಎಲ್ಲಾ ಹಂತದಲ್ಲೂ ಯುನೆಸ್ಕೋ ಬೆಂಬಲಿಸಲು ಬದ್ಧವಾಗಿದೆ’ ಎಂದು ಹೇಳಿದೆ. ಜೊತೆಗೆ ಆಕ್ಷೇಪಣೆ ಸಲ್ಲಿಸಿದಕ್ಕಾಗಿ ಯುನೆಸ್ಕೋ ಹೋರಾಟಗಾರರನ್ನು ಅಭಿನಂದಿಸಿದೆ.