ಶಿರಸಿಯ ಬಿಳೂರಿನಲ್ಲಿ ನಡೆದ ಕೆರೆ ಬೇಟೆ ಕಾರ್ಯಕ್ರಮದಲ್ಲಿ ಬೇರೆ ಬೇರೆ ಭಾಗದ ಸಾವಿರಕ್ಕೂ ಅಧಿಕ ಜನ ಭಾಗವಹಿಸಿದ್ದು, ಬುಟ್ಟಿ ತುಂಬ ಮೀನು ಹಿಡಿದಿದ್ದಾರೆ. ಜೊತೆಗೆ ದೇವಾಲಯದ ಅಭಿವೃದ್ಧಿಗೆ ಹಣಪಾವತಿಸಿ ಕೈ ಮುಗಿದಿದ್ದಾರೆ.
ಶ್ರೀ ಕಲ್ಲೇಶ್ವರ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಶನಿವಾರ ಕೆರೆ ಬೇಟೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಶಿರಸಿ ಜೊತೆ ಸುತ್ತಲಿನ ಅನೇಕ ಹಳ್ಳಿಗಳ ಜನ ಇದರಲ್ಲಿ ಭಾಗವಹಿಸಿದ್ದರು. ಸಮಿತಿಯವರು ಕೆರೆ ಬೇಟೆ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ 800ರೂ ಶುಲ್ಕ ವಿಧಿಸಿದ್ದು, ಜನ ಸಾಲಿನಲ್ಲಿ ನಿಂತು ಶುಲ್ಕ ಪಾವತಿ ಮಾಡಿದರು. ಅದಾದ ನಂತರ ಒಮ್ಮೆಲೆ ಕೆರೆಗೆ ಧುಮುಕಿ ಬರಪೂರ ಮೀನು ಹಿಡಿದರು.
ಸರಿ ಸುಮಾರು ಸಾವಿರಕ್ಕೂ ಅಧಿಕ ಜನ ಈ ಕಾರ್ಯಕ್ರಮದಲ್ಲಿದ್ದರು. ಅತ್ಯಂತ ಸಂಭ್ರಮ ಹಾಗೂ ಸಡಗರದಿಂದ ಜನ ಕೆರೆಗೆ ಹಾರಿ ಮತ್ಸö್ಯ ಶಿಖಾರಿ ಮಾಡಿದರು. ಬಿದಿರಿನ ಕಡ್ಡಿಗಳಿಂದ ತಯಾರಿಸಿದ ಕುಣಿಗಳನ್ನು ಬಳಸಿ ಹಲವರು ಮೀನು ಹಿಡಿದರು. ಮೀನು ಹಿಡಿಯಲು ಭಾಗವಹಿಸಿದ ಮೀನುಗಾರರಿಗೆ ಭಾರೀ ಪ್ರಮಾಣದ ಮೀನುಗಳು ಸಿಕ್ಕಿದ್ದು, ಕೆಲವರಿಗೆ ಮಾತ್ರ ಒಂದೂ ಮೀನು ದೊರೆತಿಲ್ಲ!
ಮೀನು ಸಿಗದ ಜನ ಈ ಬಗ್ಗೆ ಅಸಮಧಾನವ್ಯಕ್ತಪಡಿಸಲಿಲ್ಲ. `ಮೀನು ಸಿಗದಿದ್ದರೂ ಪರವಾಗಿಲ್ಲ. ದೇವಾಲಯದ ಅಭಿವೃದ್ಧಿಗೆ ನೆರವಾದರೆ ಸಾಕು’ ಎಂದು ಜನ ಭಕ್ತಿಯಿಂದ ಹೇಳಿದರು. ಕಳೆದ ವರ್ಷ ಇದೇ ಕೆರೆ ಬೇಟೆಯಲ್ಲಿ ಹೆಚ್ಚಿನ ಪ್ರಮಾಣದ ಮೀನು ಸಿಕ್ಕಿದ್ದನ್ನು ಸಹ ಸ್ಮರಿಸಿದರು.