ಹತ್ಯೆ ಮಾಡುವ ಉದ್ದೇಶದಿಂದ ಹಿಂಸಾತ್ಮಕ ರೀತಿ ಕೂಡಿಟ್ಟಿದ್ದ ಗೋವುಗಳನ್ನು ಭಟ್ಕಳ ಪೊಲೀಸರು ರಕ್ಷಿಸಿದ್ದಾರೆ. ಗುರುವಾರ ಹಾಗೂ ಶುಕ್ರವಾರ ಕಾರ್ಯಾಚರಣೆ ನಡೆಸಿ 23 ಗೋವುಗಳನ್ನು ರಕ್ಷಿಸಿದ್ದ ಪೊಲೀಸರು ಶನಿವಾರವೂ ತಮ್ಮ ಕಾರ್ಯಾಚರಣೆ ಮುಂದುವರೆಸಿದ್ದು, ಈ ದಿನ ಮತ್ತೆ ಐದು ಜಾನುವಾರುಗಳ ಜೀವ ಕಾಪಾಡಿದ್ದಾರೆ.
ಸದ್ಯ ಭಟ್ಕಳದ ಮೂಸಾ ನಗರದಲ್ಲಿ ವಾಸವಾಗಿರುವ ಹೊನ್ನಾವರದ ಮುಜಾಫರ್ ನಾಥಗೇರಿ (40) ಅವರು ಅಕ್ರಮವಾಗಿ ಜಾನುವಾರುಗಳನ್ನು ಬಂಧಿಸಿದ್ದರು. ಅವುಗಳಿಗೆ ಹುಲ್ಲು ನೀರು ಕೊಡದೇ ಹಿಂಸಿಸುತ್ತಿದ್ದರು. ಗಾಳಿ-ಬೆಳಕು ಬಾರದ ಶೆಡ್ಡಿನೊಳಗೆ ಗೋವುಗಳನ್ನು ಕಟ್ಟಿ ಅವುಗಳನ್ನು ಕೊಲ್ಲುವ ತಯಾರಿ ಮಾಡಿದ್ದರು. ಅಲ್ಲಿದ್ದ ಮೂರು ಎತ್ತು ಹಾಗೂ ಎರಡು ಕರುಗಳನ್ನು ಪೊಲೀಸರು ರಕ್ಷಿಸಿದರು.
ಮುಜಾಫರ್ ನಾಥಗೇರಿ ಅವರ ಜೊತೆ ಇನ್ನಿತರರು ಈ ಸಂಚಿನಲ್ಲಿ ಭಾಗಿಯಾದ ಅನುಮಾನಗಳಿವೆ. ಸದ್ಯ 2.80 ಲಕ್ಷ ರೂಪಾಯಿ ಮೌಲ್ಯದ ಜಾನುವಾರುಗಳನ್ನು ಪೊಲೀಸರು ಕಟುಕರ ಕೈಯಿಂದ ರಕ್ಷಿಸಿದ್ದಾರೆ. ಭಟ್ಕಳ ನಗರ ಠಾಣೆಯ ಪಿಎಸೈ ನವೀನ ನಾಯ್ಕ ಅವರು ಈ ಬಗ್ಗೆ ಕಾನೂನು ಕ್ರಮ ಜರುಗಿಸಿದ್ದು, ಜಾನುವಾರು ಹತ್ಯೆ ತಡೆ ಮತ್ತು ಸಂರಕ್ಷಣಾ ಕಾಯ್ದೆಯಡಿ ಪಿಎಸೈ ಸೋಮನಾಥ ರಾಠೋಡ ಅವರು ಪ್ರಕರಣ ದಾಖಲಿಸಿದ್ದಾರೆ.